ಅಜ್ಜಂಪುರ: ‘ಸರ್ಕಾರ, ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಹಿತ ಕಾಯಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಒತ್ತಾಯಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವೃತ್ತಿಪರತೆ ಹೆಚ್ಚಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿಗೊಳಿಸಬೇಕು. ಸಂಜೀವಿನಿ ಯೋಜನೆ ಅನುಷ್ಠಾನ ಮೂಲಕ ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ‘ಸರ್ಕಾರ 7ನೇ ವೇತನ ಜಾರಿಗೊಳಿಸಿದೆ. ಇದಕ್ಕೆ ಪ್ರತಿಯಾಗಿ ನೌಕರರು ಕರ್ತವ್ಯದಲ್ಲಿ ದಕ್ಷತೆ ಹೆಚ್ಚಿಸಿಕೊಳ್ಳಬೇಕು. ಸರ್ಕಾರಿ ಯೋಜನೆ, ಸೌಲಭ್ಯ-ಸೌಕರ್ಯಗಳನ್ನು ಅರ್ಹರಿಗೆ ತಲುಪಿಸಬೇಕು’ ಎಂದು ಮನವಿ ಮಾಡಿದರು.
ಅತ್ತಿಮೋಗ್ಗೆ ಪಂಚಾಯತಿ ವ್ಯಾಪ್ತಿಯ, ಬುಕ್ಕಾಂಬುಧಿ ರಸ್ತೆಯಲ್ಲಿ ವಿಶ್ವೇಶ್ವರ ಜಲ ನಿಗಮ ವ್ಯಾಪ್ತಿಯಲ್ಲಿ 18 ಎಕರೆ ಭೂಮಿ ಇದೆ. ಇದನ್ನು ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಇದೇ 22ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾಗಿ ಜಿ. ಎನ್. ಈಶ್ವರಪ್ಪ, ಅಧ್ಯಕ್ಷರಾಗಿ ಎಸ್.ಎಂ. ಪುಟ್ಟಸ್ವಾಮಿ, ಖಜಾಂಜಿಯಾಗಿ ಸಿ.ದೇವೇಂದ್ರಪ್ಪ, ಕಾರ್ಯದರ್ಶಿಯಾಗಿ ಸಿ. ಶಿವಕುಮಾರ್, ರಾಜ್ಯ ಪರಿಷತ್ ಸದಸ್ಯರಾಗಿ ಎಚ್. ಓ.ಮಂಜುನಾಥ್ ಮತ್ತಿತರರು ಪದಗ್ರಹಣ ಸ್ವೀಕರಿಸಿದರು.
ವಿಧಾನ ಪರಿಷತ್ ಸದಸ್ಯ ಧನಂಜಯ್ ಸರ್ಜಿ, ಕೆಪಿಸಿಸಿ ಸದಸ್ಯ ಜಿ.ನಟರಾಜ್, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕುಮಾರ್ ಮಾತನಾಡಿದರು. ವೃತ್ತಿಪರತೆ ಮತ್ತು ಕಾರ್ಯ ದಕ್ಷತೆ ಹೆಚ್ಚಿಸುವ ಕುರಿತು ಪ್ರಾಧ್ಯಾಪಕ ಏನ್. ಎಲ್. ಆನಂದ್ ಉಪನ್ಯಾಸ ನೀಡಿದರು.
ತಹಶೀಲ್ದಾರ್ ವಿನಾಯಕ ಸಾಗರ್, ಬಿಇಒ ಪರುಶರಾಮಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್, ಡಾ. ನಟರಾಜ್ ಡಾ. ಹರ್ಷ, ಸಂಘದ ರಾಜ್ಯ ಘಟಕ ಖಜಾಂಜಿ ಶಿವರುದ್ರಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ, ತರೀಕೆರೆ ತಾಲ್ಲೂಕು ಅಧ್ಯಕ್ಷ ಸಿ.ಆರ್. ಅನಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಕುಮಾರಪ್ಪ, ಕುಮಾರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.