ADVERTISEMENT

ಒಣ ರಾಜಕೀಯದಿಂದ ರಾಜ್ಯಕ್ಕೆ ಅನ್ಯಾಯ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:53 IST
Last Updated 17 ಜುಲೈ 2025, 6:53 IST
ಸಿ.ಟಿ. ರವಿ
ಸಿ.ಟಿ. ರವಿ   

ಚಿಕ್ಕಮಗಳೂರು: ‘ಕೈಗಾರಿಕೆಗಳನ್ನು ರಾಜ್ಯಕ್ಕೆ ತರುವ ವಿಚಾರದಲ್ಲಿ ಸರ್ಕಾರ ಗಂಭೀರ ನಡೆ ಇಡದಿದ್ದರೆ ಕೈಗಾರಿಕೆಗಳು ಬೇರೆ ರಾಜ್ಯದ ಪಾಲಾಗಲಿವೆ. ಸರ್ಕಾರದ ಒಣ ರಾಜಕೀಯದಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಚನ್ನರಾಯಪಟ್ಟಣ ರೈತರ ಭೂಮಿ ಸ್ವಾಧೀನ ಕೈಬಿಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಆಂಧ್ರ ಪ್ರದೇಶದ ಕೈಗಾರಿಕಾ ಸಚಿವರು ಬಂಡವಾಳ ಹೂಡಿಕೆ ಮಾಡುವವರಿಗೆ ಆಹ್ವಾನ ನೀಡಿದ್ದಾರೆ. ಆದ್ದರಿಂದ ಇಂತಹ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಆಲೋಚನೆ ನಡೆಸಬೇಕು’ ಎಂದು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದರು.

‘ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ಕಣ್ಣಿ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಎಲ್ಲ ವಿಚಾರದಲ್ಲಿ ಸರ್ವಜ್ಞನಂತೆ ಮಾತನಾಡುವ ಪ್ರಿಯಾಂಕ್ ಖರ್ಗೆ ತನ್ನ ಮೂಗಿನ ನೇರಕ್ಕೆ ನಡೆಯುತ್ತಿದ್ದ ಆಪ್ತನ ಬಗ್ಗೆ ಗೊತ್ತಿರಲಿಲ್ಲವೆ’ ಎಂದು ಪ್ರಶ್ನಿಸಿದರು.

ADVERTISEMENT

ಗ್ರಾಮೀಣ ಭಾಗದಲ್ಲಿ ಸರಿಯಾಗಿ ಬಸ್‌ಗಳೇ ಇಲ್ಲದೆ ಜನ ಸಂಕಟದಲ್ಲಿದ್ದಾರೆ. ಸರ್ಕಾರ ಶಕ್ತಿ ಯೋಜನೆಯ ಸಂಭ್ರಮದಲ್ಲಿದೆ. ಗೃಹಲಕ್ಷ್ಮಿ ಹಣ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಈ ಎಲ್ಲದರ ನಡುವೆ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.