ADVERTISEMENT

ಚಿಕ್ಕಮಗಳೂರು | ‘ದೃಢ ನಿರ್ಧಾರವೇ ಯಶಸ್ಸಿಗೆ ಹಾದಿ’

ಉದ್ಯಮದಲ್ಲಿ ಗುರಿ ತಲುಪಿದ ಕಡೂರಿನ ಸಾಧಕಿ ರಶ್ಮಿ

ಬಾಲು ಮಚ್ಚೇರಿ
Published 8 ಮಾರ್ಚ್ 2022, 6:48 IST
Last Updated 8 ಮಾರ್ಚ್ 2022, 6:48 IST
ಆಹಾರೋದ್ಯಮದಲ್ಲಿ ಯಶಸ್ವಿಯಾಗಿರುವ ಕಡೂರಿನ ರಶ್ಮಿ
ಆಹಾರೋದ್ಯಮದಲ್ಲಿ ಯಶಸ್ವಿಯಾಗಿರುವ ಕಡೂರಿನ ರಶ್ಮಿ   

ಕಡೂರು: ‘ಹೆಣ್ಣು ಸ್ವಾವಲಂಬಿಯಾಗಬೇಕು. ದೃಢ ನಿಶ್ಚಯದಿಂದ ಮುಂದುವರಿದರೆ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ’ ಎಂಬ ಖಚಿತ ಮಾತು ಉದ್ಯಮಿ ಕಡೂರಿನ ರಶ್ಮಿ ಅವರದ್ದು.

ನಾಲ್ಕು ವರ್ಷಗಳ ಹಿಂದೆ ಏನಾದರೂ ಮಾಡಬೇಕೆಂಬ ತುಡಿತವಿತ್ತು, ಆದರೆ ಅದಕ್ಕೆ ಅಡೆತಡೆಗಳು ಎದುರಾದವು. ವಿಶ್ವಾಸ ಕಳೆದುಕೊಳ್ಳದೆ ರಶ್ಮಿ ಆಹಾರ ಪದಾರ್ಥಗಳ ವ್ಯಾಪಾರ ಆರಂಭಿಸಿದರು. ಗ್ರಾಹಕರ ನಾಡಿಮಿಡಿತ ಅರಿತ ಅವರು, ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸಿ, ಮನೆ–ಮನೆಗೆ ಕೊಂಡೊಯ್ದು ವ್ಯಾಪಾರ ಮಾಡಿದರು.

ಕಡೂರಿನಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಸಾವಯವ ಸಂತೆ ಇವರಿಗೆ ಒಳ್ಳೆಯ ವೇದಿಕೆ ದೊರಕಿಸಿತು. ನವಣೆಯಿಂದ ತಯಾರಿಸಿದ ಬಿಸಿಬೇಳೆ ಬಾತ್ ಅನ್ನು ಸಂತೆಗೆ ಬಂದವರಿಗೆ ಉಚಿತವಾಗಿ ನೀಡಿದರು. ಬಹಳಷ್ಟು ಜನರು ಇದರ ರುಚಿಗೆ ಮಾರುಹೋದರು. ರಶ್ಮಿಯವರಿಗೆ ಇದು ಹೊಸ ಸ್ಫೂರ್ತಿ ಒದಗಿಸಿತು.

ADVERTISEMENT

ಪುಳಿಯೋಗರೆ ಪುಡಿ, ವಾಂಗೀಬಾತ್ ಪುಡಿ, ಧನಿಯಾಪುಡಿ, ಅಗಸೆ ಚಟ್ನಿ ಪುಡಿ, ರಸಂ ಪುಡಿ, ಸಂಬಾರ ಪುಡಿ, ಸಿರಿಧಾನ್ಯಗಳ ಉಪ್ಪಿಟ್ಟು ಮಿಶ್ರಣ, ಶುದ್ಧ ಅರಿಸಿನ ಪುಡಿ ಹೀಗೆ ಹಲವಾರು ವಿಧದ ಆಹಾರೋತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾರಂಭಿಸಿದರು. ಮೊದಲು ಅಷ್ಟಾಗಿ ಪ್ರತಿಕ್ರಿಯೆ ಬರದಿದ್ದರೂ, ನಂತರ ಇವರು ತಯಾರಿಸಿದ ಉತ್ಪನ್ನಗಳಿಗೆ ಬೇಡಿಕೆ ಕುದುರಿತು. ಪ್ರಸ್ತುತ ವಾರ್ಷಿಕವಾಗಿ ಸರಾಸರಿ ₹ 22 ಲಕ್ಷ ವಹಿವಾಟು ನಡೆಸುತ್ತಾರೆ. ಉಪ್ಪಿನಕಾಯಿ ಮತ್ತು ಜೋನಿ ಬೆಲ್ಲವನ್ನೂ ತಯಾರಿಸುತ್ತಾರೆ. ಉಪ್ಪಿನಕಾಯಿಗೆ ಅಗತ್ಯವಾದ ಮೆಣಸಿನ ಕಾಯಿಯನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಾರೆ. ಕಾಯಕದಲ್ಲಿ ತಂದೆ, ತಾಯಿ, ತಮ್ಮ ಮತ್ತು ಮಗ ಜೊತೆಯಾಗಿದ್ದಾರೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಇವರ ಉತ್ಪನ್ನಗಳು ಹೊರಜಿಲ್ಲೆಗಳಿಗಷ್ಟೇ ಅಲ್ಲದೆ ಮುಂಬೈನಲ್ಲೂ ಸಹ ಗ್ರಾಹಕರನ್ನು ಸೆಳೆದಿವೆ.

‘ಆತ್ಮವಿಶ್ವಾಸ ಇದ್ದರೆ ಸಾಧನೆ ಸುಲಭ’
‘ಸ್ವಾವಲಂಬನೆಯ ಕನಸು ಈ ಸಾಧನೆಗೆ ದಾರಿ ತೋರಿಸಿತು. ಈ ವ್ಯವಹಾರದಲ್ಲಿ ನೆಮ್ಮದಿ ಮತ್ತು ಸಂತಸ ಎರಡೂ ಇವೆ. ಬಹುಮುಖ್ಯವಾಗಿ ಮಹಿಳೆಯರಿಗೆ ಬೇಕಾದ್ದು ಆತ್ಮವಿಶ್ವಾಸ. ಅದಿದ್ದರೆ ಸಾಧನೆ ಸುಲಭ’ ಎನ್ನುವ ರಶ್ಮಿ, ಯಾರೇ ಕೇಳಿದರೂ ಸ್ವ ಉದ್ಯಮದ ಬಗ್ಗೆ ಮಾಹಿತಿ ನೀಡುತ್ತಾರೆ. ಇವರ ಉದ್ಯಮದಿಂದ ಪರೋಕ್ಷವಾಗಿ ಹತ್ತಾರು ಜನಗಳಿಗೆ ಕೆಲಸ ದೊರೆತಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.