ADVERTISEMENT

ನರಸಿಂಹರಾಜಪುರ: ರೈತ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 14:11 IST
Last Updated 4 ಜೂನ್ 2025, 14:11 IST
ನರಸಿಂಹರಾಜಪುರದ ಮಹಾವೀರ ಭವನದಲ್ಲಿ ಬುಧವಾರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎನ್.ಎಂ.ನಾಗೇಶ್ ಚಿಕ್ಕಮಗಳೂರಿನಲ್ಲಿ ನಡೆಯುವ ರೈತ ಸಮಾವೇಶದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು
ನರಸಿಂಹರಾಜಪುರದ ಮಹಾವೀರ ಭವನದಲ್ಲಿ ಬುಧವಾರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎನ್.ಎಂ.ನಾಗೇಶ್ ಚಿಕ್ಕಮಗಳೂರಿನಲ್ಲಿ ನಡೆಯುವ ರೈತ ಸಮಾವೇಶದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು   

ನರಸಿಂಹರಾಜಪುರ: ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಜೂನ್ 9ರಂದು ಚಿಕ್ಕಮಗಳೂರಿನಲ್ಲಿ ರೈತ ಸಮಾವೇಶ ನಡೆಯಲಿದೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.

ಪಟ್ಟಣದ ಬಸ್ತಿಮಠದ ಮಹಾವೀರ ಭವನದಲ್ಲಿ ಬುಧವಾರ ರೈತ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತರು ಮತ್ತು ಅರಣ್ಯ ಇಲಾಖೆ ನಡುವೆ ಇರುವ ಸಂಘರ್ಷ ತಪ್ಪಿಸಿ, ಮಲೆನಾಡಿನ ಜನಜೀವನ ಉಳಿಸುವಂತೆ ಒತ್ತಾಯಿಸಿ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. 9ರಂದು ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್‌ವರೆಗೆ ಮೆರವಣಿಗೆ ನಡೆದು, ಅಲ್ಲಿಯೇ ಸಮಾವೇಶ ಜರುಗಲಿದೆ.

ADVERTISEMENT

ಸಮಾವೇಶದಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ಜಿಲ್ಲೆಯ ಶಾಸಕರು, ರೈತ ಸಂಘಟನೆಯ ಮುಖಂಡರು ಪಾಲ್ಗೊಳ್ಳುವರು.

ಸಮಾವೇಶದಲ್ಲಿಯೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಘೋಷಣೆ ಮಾಡಬೇಕು ಎಂಬುದೇ ನಮ್ಮ ಆಗ್ರಹ. ಶೃಂಗೇರಿ ಹಾಗೂ ಖಾಂಡ್ಯ ಹೋಬಳಿಯಿಂದ 2,500 ರೈತರು, ನಾಗರಿಕರು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ರೈತರಿಗೆ ಸಮಾವೇಶ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ನಮೂನೆ 57ರಲ್ಲಿ ಪಡೆದಿರುವ ಅರ್ಜಿಗಳಿಗೆ ಸಾಗುವಳಿ ಚೀಟಿ ನೀಡಬೇಕು. ದಟ್ಟಾರಣ್ಯ ಪರಿಷ್ಕೃತ ಪಟ್ಟಿ ತಯಾರಿಸುವಾಗ ಗ್ರಾ.ಪಂ. ಮೂಲಕ ಪ್ರಚಾರ ಮಾಡಿ, ರೈತರ ಹಾಗೂ ಗ್ರಾಮಸ್ಥರ ಗಮನಕ್ಕೆ ತರಬೇಕು. ಸೆಕ್ಷನ್ 4(1) ಪ್ರಸ್ತಾವನೆಯಲ್ಲಿರುವ ರೈತರ ಜಮೀನು, ಮನೆ, ಗ್ರಾಮ, ಶಾಲಾ–ಕಾಲೇಜು, ಆಟದ ಮೈದಾನ, ಆಸ್ಪತ್ರೆ, ಸ್ಮಶಾನ, ಆಶ್ರಯ ನಿವೇಶನಕ್ಕೆ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಜಾಗ ಮೀಸಲಿಡಬೇಕು. ನಗರಕ್ಕೆ ಹೊಂದಿಕೊಂಡಿರುವ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದ ಜಾಗವನ್ನು ಸೆಕ್ಷನ್ 4(1) ಮೀಸಲು ಅರಣ್ಯ ಪ್ರಸ್ತಾವನೆಯಿಂದ ಕೈ ಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ತಾಲ್ಲೂಕು ಕಾರ್ಯದರ್ಶಿ ಗಡಿಗೇಶ್ವರ ರತ್ನಾಕರ, ಶೃಂಗೇರಿ ಕ್ಷೇತ್ರದ ಉಪಾಧ್ಯಕ್ಷ ನವೀನ್ ಕರಗಣೆ, ಸಮಿತಿಯ ಮುಖಂಡರಾದ ಎಚ್.ಡಿ.ಲೋಕೇಶ್, ಎನ್.ಡಿ.ಪ್ರಸಾದ್, ಅರುಣ್ ಜೈನ್, ಕಾರ್ತಿಕ್, ಕೌಶಿಕ್, ಮದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.