ಚಿಕ್ಕಮಗಳೂರು: ಅಯ್ಯನಕೆರೆಯ ಕೋಡಿಯಿಂದ ಹರಿಯುವ ನೀರನ್ನು ನಾಗೇನಹಳ್ಳಿ ಮತ್ತು ಹುಲಿಕೆರೆ ಸಮೀಪದ ಬೆರಟಿಕೆರೆಗೆ ಹರಿಸುವ ಯೋಜನೆ ಮತ್ತೊಮ್ಮೆ ನನೆಗುದಿಗೆ ಬೀಳುವ ಆತಂಕ ರೈತರಲ್ಲಿ ಕಾಡುತ್ತಿದೆ. ಈ ಯೋಜನೆಗೆ ಅನುಮೋದನೆ ದೊರೆತು ಮೂರು ವರ್ಷಗಳಾಗಿದ್ದರೂ ಪದೇ ಪದೇ ಅಡೆತಡೆಗಳು ಬರುತ್ತಿದ್ದು, ಕೆರೆಗಳು ತುಂಬುವ ಈ ಭಾಗದ ರೈತರ ಆಸೆ ಕನಸಾಗಿಯೇ ಉಳಿದಿದೆ.
ಅಯ್ಯನಕೆರೆ ತುಂಬಿದ ಸಂದರ್ಭದಲ್ಲಿ ಕೋಡಿಯಿಂದ ಹೆಚ್ಚುವರಿಯಾಗಿ ಹರಿಯುವ ನೀರನ್ನು ಈ ಎರಡು ಕೆರೆಗೆ ತುಂಬಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲೇ ಯೋಜನೆ ರೂಪುಗೊಂಡಿತ್ತು. ₹9.90 ಕೋಟಿ ಯೋಜನೆಗೆ ಅನುಮೋದನೆ ದೊರೆತು ಮೊದಲ ಹಂತದಲ್ಲಿ ₹3.30 ಕೋಟಿ ಕೂಡ ಬಿಡುಗಡೆಯಾಗಿತ್ತು.
ಕೋಡಿಯಿಂದ ಹರಿಯುವ ನೀರನ್ನು ಅಗ್ರಹಾರದ ಸಮೀಪದ ಚೆಕ್‌ಡ್ಯಾಂ ಬಳಿ ನೀರು ಸಂಗ್ರಹಿಸಿ ಬರಪೀಡಿತ ಹಳ್ಳಿಗಳ ಕೆರೆಗಳಿಗೆ ಹರಿಸುವುದು ಯೋಜನೆ ಉದ್ದೇಶ. 6.5 ಕಿ.ಮೀ ದೂರಕ್ಕೆ ಪೈಪ್‌ಲೈನ್ ಮೂಲಕ ನೀರು ಸಾಗಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿತ್ತು. ಸರ್ಕಾರ ಬದಲಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಹಳೇ ಯೋಜನೆಗಳನ್ನು ತಡೆ ಹಿಡಿದಿತ್ತು.
ಎರಡು ವರ್ಷಗಳ ಬಳಿಕ ಕಾಮಗಾರಿ ಆರಂಭಿಸಲು ಅನುಮತಿ ದೊರೆತಿದ್ದು, ಸಿದ್ಧತೆಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಡಿಕೊಂಡು ಕಾಮಗಾರಿಯನ್ನೂ ಆರಂಭಿಸಿದ್ದರು. ಆದರೆ, ಅಗ್ರಹಾರ ಚೆಕ್‌ಡ್ಯಾಂ ನೀರು ಕಡೂರು ತಾಲ್ಲೂಕಿನ ನೂರಾರು ಹಳ್ಳಿಗಳ ಜಲಮೂಲವಾಗಿದ್ದು, ಆ ನೀರನ್ನು ಮತ್ತೊಂದು ಯೋಜನೆಗೆ ಬಳಸಿದರೆ ವೇದಾವತಿ ನದಿಯ ಹರಿವು ಕಡಿಮೆಯಾಗಲಿದೆ ಎಂಬುದು ಕೆಳಭಾಗದ ಹಳ್ಳಿಗಳ ರೈತರ ಆತಂಕ.
ಬಾಣೂರು, ಶಿವಪುರ, ಗುಬ್ಬಿಹಳ್ಳಿ, ಜಿಗಣೆಹಳ್ಳಿ, ಎನ್.ಜಿ.ಕೊಪ್ಪಲು, ಬಂಡಿಕೊಪ್ಪಲು, ಪಟ್ಟಣಗೆರೆ, ಕುಂತಿಹೊಳೆ, ಯಳ್ಳಂಬಳಸೆ ಸೇರಿ ಹಲವು ಹಳ್ಳಿಗಳಿಗೆ ಈ ನದಿಯ ನೀರಿನಿಂದ ಅನುಕೂಲವಾಗಿದೆ. ಹೊಸ ಯೋಜನೆಯ ಮೂಲಕ ಹುಲಿಕೆರೆ ಮತ್ತು ನಾಗೇನಹಳ್ಳಿ ಕೆರೆಗಳಿಗೆ ನೀರು ಹರಿಸಿದರೆ ನದಿಯ ಹರಿವು ಕಡಿಮೆಯಾಗಲಿದೆ ಎಂಬುದು ಅವರ ಆತಂಕ. ಎರಡು ಭಾಗದ ರೈತರಿಂದ ಪರ–ವಿರೋಧ ವ್ಯಕ್ತವಾದ ಬಳಿಕ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆ ಸ್ಥಗಿತಗೊಳಿಸಿದೆ.
ಸಮಿತಿಗೆ 10 ರೈತರ ಪಟ್ಟಿಯನ್ನು ಅಧಿಕಾರಿಗಳು ಕೇಳಿದ್ದರು ಈಗಾಗಲೇ ಕೊಡಲಾಗಿದೆ. ಆದಷ್ಟು ಬೇಗ ಸಭೆ ಕರೆದು ಕಾಮಗಾರಿ ಆರಂಭಿಸಬೇಕುಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ
‘ಹೊಸ ಯೋಜನೆಯಿಂದ ಈಗಾಗಲೇ ಕೋಡಿ ನೀರು ಬಳಸುತ್ತಿರುವ ಭಾಗದ ರೈತರಿಗೆ ತೊಂದರೆಯಾಗುವುದಿಲ್ಲ. 100 ಎಚ್.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಿ ಮಳೆಗಾಲದ 45 ದಿನ ಮಾತ್ರ ನೀರೆತ್ತುವ ಯೋಜನೆ ಇದಾಗಿದೆ. ಪ್ರತಿ ಸೆಕೆಂಡಿಗೆ 3,500 ಲೀಟರ್ ನೀರು ಹರಿಯುತ್ತಿದ್ದು, ಇದರಲ್ಲಿ ಎರಡೂವರೆ ಲೀಟರ್ ನೀರನ್ನು ಮಾತ್ರ ಬಳಸಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಈ ವಿಷಯವನ್ನು ಎರಡೂ ಕಡೆಯ ರೈತರಿಗೆ ಮನವರಿಕೆ ಮಾಡಲಾಗುವುದು’ ಎಂದು ಅಧಿಕಾರಿಗಳು ಹೇಳುತ್ತಾರೆ.
ನಡೆಯದ ಸಭೆ: ರೈತರ ಆತಂಕ
ಯೋಜನೆಯ ಬಗ್ಗೆ ರೈತರಲ್ಲಿ ಗೊಂದಲವಿದೆ. ಎರಡೂ ಕಡೆಯ ತಲಾ 10 ರೈತರನ್ನು ಕರೆಸಿ ಮಾತುಕತೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಕಾಮಗಾರಿ ಸ್ಥಗಿತಗೊಂಡು ಒಂದು ತಿಂಗಳಿಗೂ ಹೆಚ್ಚು ಸಮಯವಾಗಿದ್ದು ಮಾತುಕತೆ ನಡೆದಿಲ್ಲ. ಸಭೆಯಲ್ಲಿ ಭಾಗವಹಿಸಲು 10 ರೈತರ ಹೆಸರನ್ನೂ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೆ ಸಭೆ ಕರೆದಿಲ್ಲ. ಯೋಜನೆ ಮತ್ತೊಮ್ಮೆ ನನೆಗುದಿಗೆ ಬೀಳುವ ಆತಂಕ ಇದೆ ಎಂಬುದು ಹುಲಿಕೆರೆ ಮತ್ತು ನಾಗೇನಹಳ್ಳಿ ರೈತರ ಆತಂಕ. ಕಾಮಗಾರಿ ಪೂರ್ಣಗೊಂಡರೆ ಮುಂದಿನ ವರ್ಷದ ಮಳೆಗಾಲದಲ್ಲಿ ಕೆರೆಗಳಿಗೆ ನೀರು ಬರುವ ಆಸೆ ಇತ್ತು. ಜಿಲ್ಲಾಧಿಕಾರಿ ಅವರು ಕೂಡಲೇ ಸಭೆ ನಡೆಸಿ ಎಲ್ಲರ ಮನವೊಲಿಸಿ ಕಾಮಗಾರಿ ಆರಂಭಿಸಬೇಕು ಎಂಬುದು ಅವರ ಒತ್ತಾಯ.
‘ಸಮಿತಿ ರಚನೆಯಾಗುತ್ತಿದೆ’
‘ಎರಡೂ ಕಡೆಯ ರೈತರನ್ನು ಒಳಗೊಂಡ ಸಮಿತಿ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಇ. ದಕ್ಷಿಣಮೂರ್ತಿ ತಿಳಿಸಿದರು. ‘ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ. ಇಬ್ಬರು ಶಾಸಕರು ಎರಡೂ ಕಡೆಯ ತಲಾ 10 ರೈತರನ್ನು ಒಳಗೊಂಡ ಸಮಿತಿ ರಚನೆಯಾಗುತ್ತಿದೆ. ಸದ್ಯದಲ್ಲೇ ಸಭೆ ನಡೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.