ADVERTISEMENT

ಕೊಪ್ಪ | ಹಕ್ಕುಪತ್ರ ವಿತರಣೆಗೆ ಬಿಜೆಪಿ ಅಡ್ಡಗಾಲು: ಶಾಸಕ ರಾಜೇಗೌಡ ಟೀಕೆ

ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 7:54 IST
Last Updated 17 ಮಾರ್ಚ್ 2023, 7:54 IST
ಕೊಪ್ಪದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರು ಫಲಾನುಭವಿಗಳಿಗೆ 94 ‘ಸಿ’ ಹಕ್ಕುಪತ್ರ ವಿತರಿಸಿದರು.
ಕೊಪ್ಪದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರು ಫಲಾನುಭವಿಗಳಿಗೆ 94 ‘ಸಿ’ ಹಕ್ಕುಪತ್ರ ವಿತರಿಸಿದರು.   

ಕೊಪ್ಪ: ‘ಹಕ್ಕುಪತ್ರ ಪಡೆದವರು ಇ-ಸ್ವತ್ತು ಮಾಡಿಸಿಕೊಳ್ಳಿ. ಇದರಿಂದ ಹೊಸ ಮನೆ ಕಟ್ಟಿಕೊಳ್ಳಲು, ಸಾಲ ಮಂಜೂರು ಮಾಡಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಗುರುವಾರ ಫಲಾನುಭವಿಗಳಿಗೆ 94 ‘ಸಿ’ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿ, ‘94 ಸಿ ಯೋಜನೆ ಅಡಿಯಲ್ಲಿ 64 ಮಂದಿಗೆ ಹಕ್ಕುಪತ್ರ ಕೊಡಲು ತೀರ್ಮಾನವಾಗಿತ್ತು. ಕೊಪ್ಪವನ್ನು ನೋಡಲ್ ತಾಲ್ಲೂಕನ್ನಾಗಿ ಮಾಡಿಕೊಂಡಿರುವ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಪಕ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರು ಹಕ್ಕುಪತ್ರ ವಿತರಣೆ ದಿನ ಮುಂದೂಡುವಂತೆ ಹೇಳಿದ್ದರು’ ಎಂದು ತಿಳಿಸಿದರು.

‘ಜನರಿಗೆ ಹಕ್ಕುಪತ್ರ ಕೊಡಬಾರದು ಎಂಬ ಧೋರಣೆ ಬಿಜೆಪಿಯವರಿಗೆ ಇದೆ ಎಂದು ಭಾಸವಾಗುತ್ತಿದೆ. ಎಲ್ಲದರಲ್ಲೂ ಅಡ್ಡಗಾಲು ಹಾಕುತ್ತಿದ್ದಾರೆ. ಹಕ್ಕುಪತ್ರ ಕೊಡುತ್ತಿಲ್ಲ ಎಂದು ಅವರು ಪ್ರತಿಭಟನೆ ನಡೆಸುತ್ತಾರೆ, ಹಕ್ಕುಪತ್ರ ವಿತರಿಸಲು ಮುಂದಾದರೆ ಅಡ್ಡಗಾಲು ಹಾಕುತ್ತಾರೆ. ಇಂದು ಹಕ್ಕುಪತ್ರ ಕೊಡುತ್ತಿಲ್ಲ ಎಂದು ಕೆಲವು ಅಧಿಕಾರಿಗಳು ಮಾಹಿತಿ ಕೊರತೆಯಿಂದಾಗಿ ಹೇಳಿದ್ದರಿಂದ ಅನೇಕ ಫಲಾನುಭವಿಗಳು ಬಂದಿಲ್ಲ’ ಎಂದು ಹೇಳಿದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ರಶೀದ್, ಮೈತ್ರಾ ಗಣೇಶ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಬರ್ಕತ್ ಆಲಿ, ನಾರ್ವೆ ಸಾಧಿಕ್, ವಸಂತಿ ಪಾಂಡುರಂಗ ಇದ್ದರು.

ಪ್ರತಿಭಟನೆ ಬಳಿಕ ಹಕ್ಕುಪತ್ರ: ಗುರುವಾರ ಹಕ್ಕುಪತ್ರ ವಿತರಿಸಲು ನಿರ್ಧರಿಸಲಾಗಿತ್ತು. ಫಲಾನುಭವಿಗಳು ಕಾದು ಕುಳಿತಿದ್ದರು. ಆದರೆ, ಪ್ರಾಣೇಶ್ ಅವರು ದಿನಾಂಕ ಮುಂದೂಡುವಂತೆ ಸೂಚಿಸಿರುವುದಾಗಿ ತಹಶೀಲ್ದಾರ್ ವಿಮಲಾ ಸುಪ್ರಿಯಾ ಹೇಳಿದರು. ಇದರಿಂದ ಆಕ್ರೋಶಗೊಂಡ ಫಲಾನುಭವಿಗಳು ಕಾಂಗ್ರೆಸ್ ಮುಖಂಡರ ಜತೆಗೂಡಿ ದಿಢೀರ್ ಪ್ರತಿಭಟನೆಗಿಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಅವರು ಪ್ರಾಣೇಶ್ ಅವರಿಗೆ ದೂರವಾಣಿ ಕರೆ ಮಾಡಿದಾಗ, ‘ಮಂಗಳವಾರ ಅಥವಾ ಬುಧವಾರ ವಿತರಣೆಗೆ ಬರುವುದಾಗಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಧೀರ್ ಕುಮಾರ್, ಹಕ್ಕುಪತ್ರ ವಿತರಣೆಗೆ ಪಟ್ಟು ಹಿಡಿದ ಬಳಿಕ ಪ್ರಾಣೇಶ್ ಅವರು ತಹಶೀಲ್ದಾರ್ ಅವರಿಗೆ ಹಕ್ಕುಪತ್ರ ವಿತರಿಸಲು ಸಮ್ಮತಿಸಿದರು.

ಉಳಿಕೆಯಾದ ಫಲಾನುಭವಿಗಳಿಗೆ ಮಂಗಳವಾರ ಬೆಳಿಗ್ಗೆ ಹಕ್ಕುಪತ್ರ ವಿತರಿಸುವುದಾಗಿ ಶಾಸಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.