ADVERTISEMENT

ಸಂವಿಧಾನ ಆಶಯ ಪೂರ್ಣ ಜಾರಿಯಾದಾಗ ಭಾರತ ಸುರಕ್ಷಿತ: ಕೃಷ್ಣಮೂರ್ತಿ

ಬಹುಜನ ಸಮಾಜ ಪಕ್ಷದಿಂದ ಸಂವಿಧಾನ ಸಂರಕ್ಷಣೆಗಾಗಿ ‘ಜೈಭೀಮ್‌’ ಜನಜಾಗೃತಿ ಜಾಥಾ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 8:18 IST
Last Updated 2 ನವೆಂಬರ್ 2022, 8:18 IST
ಚಿಕ್ಕಮಗಳೂರಿನಲ್ಲಿ ಮಂಗಳವಾರ ಬಹುಜನ ಸಮಾಜ ಪಕ್ಷ ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಣೆಗಾಗಿ ಜೈಭೀಮ್‌ ಜನಜಾಗೃತಿ ಜಾಥಾ’ದಲ್ಲಿ ಸಂವಿಧಾನ ಪ್ರಸ್ತಾವನೆ ಬೋಧನೆ ಪ್ರಮಾಣ ಸ್ವೀಕರಿಸಿದರು.
ಚಿಕ್ಕಮಗಳೂರಿನಲ್ಲಿ ಮಂಗಳವಾರ ಬಹುಜನ ಸಮಾಜ ಪಕ್ಷ ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಣೆಗಾಗಿ ಜೈಭೀಮ್‌ ಜನಜಾಗೃತಿ ಜಾಥಾ’ದಲ್ಲಿ ಸಂವಿಧಾನ ಪ್ರಸ್ತಾವನೆ ಬೋಧನೆ ಪ್ರಮಾಣ ಸ್ವೀಕರಿಸಿದರು.   

ಚಿಕ್ಕಮಗಳೂರು: ದೇಶದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪರಿಪೂರ್ಣ ಸಂವಿಧಾನ ಜಾರಿಯಾದಲ್ಲಿ ಭಾರತ ಉಳಿಯಲಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಪ್ರತಿಪಾದಿಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಂಗಳವಾರ ಬಹುಜನ ಸಮಾಜ ಪಕ್ಷ ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಣೆಗಾಗಿ ಜೈಭೀಮ್‌ ಜನಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದಿದೆ. ಆದರೆ ಸಮಾಜದಲ್ಲಿ ಅಸಮಾನತೆ, ಶೋಷಣೆ, ಅಸ್ಪೃಶ್ಯತೆ ಜೀವಂತವಾಗಿವೆ. ಪಟ್ಟಭದ್ರಾಹಿತಾಸಕ್ತಿ ರಾಜಕೀಯ ಪಕ್ಷಗಳ ಆಡಳಿತದಿಂದ ದೇಶದಲ್ಲಿ ಸಂವಿಧಾನ ಆಶಯಗಳು ಪೂರ್ಣವಾಗಿ ಈಡೇರಲು ಸಾಧ್ಯವಾಗಿಲ್ಲ ಎಂದರು.

‘ಕಾಂಗ್ರೆಸ್ 55 ವರ್ಷದ ಆಡಳಿತದಲ್ಲಿ 101 ಬಾರಿ ತಿದ್ದುಪಡಿ ಮಾಡಿ ಸಂವಿಧಾನ ದುರ್ಬಲಗೊಳಿಸುವ ಕೆಲಸ ಮಾಡಿದೆ. ಬಿಜೆ‍ಪಿ ಅವಧಿಯಲ್ಲಿ ಜಾತಿಧರ್ಮದ ಮೂಲಕ ಕೋಮು ಸಾಮರಸ್ಯ ಕದಡುವ ಕೆಲಸ ಮಾಡಿದೆ’ ಎಂದು ದೂರಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ಬಡತನ, ನಿರುದ್ಯೋಗ, ಬೆಲೆ ಏರಿಕೆ, ಜಿಡಿಪಿ ಕುಸಿತ, ಅವರ ಕೊಡುಗೆಯಾಗಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಚುನಾವಣೆ ಸನ್ನಹಿತವಾಗುತ್ತಿದೆ. ಕಾಂಗ್ರೆಸ್ ಪಕ್ಷವು ‘ಭಾರತ ಜೋಡೊಡೋ ಯಾತ್ರೆ’, ಬಿಜೆಪಿ ‘ಜನ ಸಂಕಲ್ಪಯಾತ್ರೆ ಹಾಗೂ, ಜೆಡಿಎಸ್ ಪಂಚರತ್ನ ಯಾತ್ರೆ ಕೈಗೊಂಡಿವೆ. ಅಧಿಕಾರವಧಿಯಲ್ಲಿ ಸಂವಿಧಾನವನ್ನು ಪರಿಪೂರ್ಣವಾಗಿ ಜಾರಿಗೊಳಿಸಿದ್ದರೆ ಯಾತ್ರೆ ನಡೆಸುವ ಅಗತ್ಯವಿರಲಿಲ್ಲ ಇದು ಪ್ರಾಯಶ್ಚಿತ್ತ ಯಾತ್ರೆ’ ಎಂದು ಕುಟುಕಿದರು.

‘ಅಧಿಕಾರ ವಹಿಸಿಕೊಳ್ಳುವಾಗ ಸಂವಿಧಾನದ ಮೇಲೆ ಪ್ರಮಾಣ ಮಾಡುವ ರಾಜಕೀಯ ನಾಯಕರಿಗೆ ಕಿಂಚಿತ್ತೂ ಗೌರವವಿಲ್ಲ. ಸಂವಿಧಾನವನ್ನೇ ಬದಲಾವಣೆ ಮಾಡುವುದಾಗಿ ಬಿಜೆಪಿ ನಾಯಕರು ಹೇಳುತ್ತಾರೆ. ಪವಿತ್ರ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ’ ಎಂದರು.

‘ಭಾರತ ಸಂವಿಧಾನ ಉಳಿಯಬೇಕು ಎಂಬ ನಿಟ್ಟಿನಲ್ಲಿ ಪಕ್ಷದಿಂದ ಸೆ.28 ರಿಂದ ರಾಜ್ಯಾದ್ಯಂತ ಜನಜಾಗೃತಿ ಜಾಥಾ ಕೈಗೊಳ್ಳಲಾಗಿದೆ. ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ’ ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ದಿನೇಶ್‌ ಗೌತಮ್ ಮಾತನಾಡಿ, ದೇಶದಲ್ಲಿ ಜಾತೀಯತೆ, ಕೋಮುದ್ವೇಷ ಹರಡುವ ಮೂಲಕ ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸಿದೆ. ಮತದಾರರು ಸುಳ್ಳು ಆಶ್ವಾಸನೆ, ಹಣ–ಆಮಿಷಗಳಿಗೆ ಒಳಗಾಗದೆ, ವಿವೇಚನೆಯಿಂದ ಸಮರ್ಥ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಕೇಳಿಕೊಂಡರು.

ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಗೋಪಿನಾಥ್‌, ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ಕಾರ್ಯದರ್ಶಿ ವೇಲಾಯುಧನ್‌, ಕೆ.ಬಿ.ಸುಧಾ, ಜಾಕೀರ್ ಆಲಿಖಾನ್‌, ಪಿ.ಪರಮೇಶ್ವರ್, ಮಂಜಯ್ಯ, ಜಿಲ್ಲಾ ಉಪಾಧ್ಯಕ್ಷ ಶಂಕರ್, ಗಂಗಾಧರ್, ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.