
ಮೂಡಿಗೆರೆ: ತಾಲ್ಲೂಕಿನ ಗಡಿಭಾಗದಲ್ಲಿ ಹರಿಯುವ ಜಪಾವತಿ ನದಿಗೆ ಕಾಫಿ ಪಲ್ಪರ್ ನೀರನ್ನು ಬಿಟ್ಟಿದ್ದು, ನದಿಯ ನೀರೆಲ್ಲವೂ ಕಪ್ಪಾಗಿದೆ.
ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಗಡಿಭಾಗದಲ್ಲಿರುವ ಈ ನದಿಯು ಹೇಮಾವತಿಯ ಉಪನದಿಯಾಗಿದೆ. ನೀರು ಮಲೀನವಾಗಿರುವುದರಿಂದ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಗುಂದ, ಉದುಸೆ, ಹೊತ್ತಿಕೆರೆ, ಹೆಗ್ಗರವಳ್ಳಿ, ಚೆಕ್ಕುಡಿಗೆ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಅಲ್ಲದೇ ಕಾಫಿ ಪಲ್ಪರಿನ ನೀರು ನದಿ ಸೇರಿರುವುದರಿಂದ ಜಲಚರಗಳ ಜೀವಕ್ಕೂ ಅಪಾಯ ಎದುರಾಗಿದೆ.
ಈ ನದಿಯು ಹಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಪಾವತಿ ಗ್ರಾಮದಲ್ಲಿ ಉಗಮವಾಗುತ್ತಿದ್ದು, ದೇವರುಂದ, ಕನ್ನೇಹಳ್ಳಿ, ಕಜ್ಜಿಹಳ್ಳಿ, ಕಿರುಗುಂದ, ಉದುಸೆ ಗ್ರಾಮದ ಮೂಲಕ ಹರಿದು ಹೆಗ್ಗರವಳ್ಳಿ ಗ್ರಾಮದಲ್ಲಿ ಹೇಮಾವತಿ ನದಿಯನ್ನು ಸೇರುತ್ತದೆ. ಈ ನದಿಗೆ ಕಳೆದ ನಾಲ್ಕೈದು ದಿನದಿಂದ ಕಾಫಿ ಸಂಸ್ಕರಿಸಿದ ಪಲ್ಪರ್ ತ್ಯಾಜ್ಯದೊಂದಿಗೆ ಕೊಳಚೆ ನೀರನ್ನು ಬಿಡಲಾಗುತ್ತಿದೆ. ಯಾವ ತೋಟದ ಮಾಲೀಕರು ಕಾಫಿ ಸಂಸ್ಕರಿಸಿದ ಕೊಳಚೆ ನೀರನ್ನು ಬಿಡುತ್ತಿದ್ದಾರೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ನದಿಯ ನೀರು ಮಾತ್ರ ಕಪ್ಪಾಗಿ ಹರಿಯುತ್ತಿದ್ದು, ವಾಸನೆಯುಕ್ತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿವರ್ಷ ಜಪಾವತಿ ನದಿಗೆ ಕಾಫಿ ಸಂಸ್ಕರಿಸಿದ ಪಲ್ಪರ್ ನೀರನ್ನು ಹರಿಯ ಬಿಡುವುದು ಸಾಮಾನ್ಯ ಎಂಬಂತಾಗಿದೆ. ಕಳೆದ ವರ್ಷ ಈ ಬಗ್ಗೆ ಸ್ಥಳೀಯರು ನೀಡಿದ ದೂರಿನಂತೆ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪಲ್ಪರ್ ನೀರು ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದುವರೆಗೂ ಯಾವುದೇ ತೋಟದ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಮೂಡಿಗೆರೆ ತಾಲ್ಲೂಕಿಗೆ ಸೇರುವ ಕಾಫಿ ತೋಟಗಳಿಂದ ಕಾಫಿ ಸಂಸ್ಕರಿಸಿದ ಕೊಳಚೆ ನೀರು ಹರಿಯುತ್ತಿಲ್ಲ. ಸಕಲೇಶಪುರ ತಾಲ್ಲೂಕಿನ ಕಾಫಿ ಎಸ್ಟೇಟ್‌ಗಳಿಂದ ಹರಿಯ ಬಿಡಲಾಗುತ್ತಿದೆ ಎಂಬುದು ಸ್ಥಳೀಯ ಅಧಿಕಾರಿಗಳ ಪ್ರತಿಕ್ರಿಯೆಯಾಗಿದೆ.
ನದಿಯ ನೀರು ಕಲುಷಿತವಾಗಿರುವ ಬಗ್ಗೆ ಶಾಸಕಿ ನಯನಾ ಮೋಟಮ್ಮ, ತಹಶೀಲ್ದಾರ್ ಎಸ್. ಅಶ್ವಿನಿ ಅವರಿಗೆ ಸ್ಥಳೀಯರು ದೂರು ನೀಡಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
‘ಜಪಾವತಿ ನದಿಗೆ ಕಾಫಿ ಸಂಸ್ಕರಿಸಿದ ಪಲ್ಪರ್ ನೀರನ್ನು ಯಾವುದೋ ತೋಟದ ಮಾಲೀಕರು ಹರಿಯ ಬಿಡುತ್ತಿರುವುದರಿಂದ ನದಿ ಸಂಪೂರ್ಣವಾಗಿ ಮಲೀನವಾಗಿದೆ. ನದಿಯ ಉದ್ದಕ್ಕೂ ದುರ್ವಾಸನೆಯಿಂದ ಕೂಡಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಕಿರುಗುಂದ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗದೇ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಗ್ರಾ.ಪಂ. ಮುಂದಾಗಿದೆ. ನದಿಯಲ್ಲಿ ಜಲಚರಗಳು ನಾಶವಾಗಿದ್ದು, ಪ್ರತಿವರ್ಷ ಕೆಲ ತೋಟದ ಮಾಲೀಕರು ಇದೆ ರೀತಿ ನದಿಗೆ ಕೊಳಚೆ ನೀರನ್ನು ಹರಿಯ ಬಿಡುತ್ತಿದ್ದಾರೆ. ಯಾವ ತೋಟದ ಮಾಲೀಕರು ಈ ರೀತಿ ನದಿಗೆ ತ್ಯಾಜ್ಯದ ನೀರನ್ನು ಹರಿಯ ಬಿಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕಿರುಗುಂದ ಗ್ರಾ.ಪಂ. ಮಾಜಿ ಅಧ್ಯಕ್ಷ ಯು.ಎಚ್. ರಾಜಶೇಖರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.