ADVERTISEMENT

ಐಟಿ ದಾಳಿ:ಜೆಡಿಎಸ್‌,ಕಾಂಗ್ರೆಸ್‌ ಪ್ರತಿಭಟನೆ;ಸಿಎಂ ರಾಜೀನಾಮೆಗೆ ಸಿ.ಟಿ.ರವಿ ಆಗ್ರಹ

ಐಟಿ ದಾಳಿ; ಜೆಡಿಎಸ್‌–ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 12:57 IST
Last Updated 29 ಮಾರ್ಚ್ 2019, 12:57 IST
ಸಿ.ಟಿ.ರವಿ 
ಸಿ.ಟಿ.ರವಿ    

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆದಾಯ ತೆರಿಗೆ (ಐಟಿ) ಅಧಿಕಾರಿಗಳ ದಾಳಿಯ ಗುಪ್ತಚರ (ಇಂಟಲಿಜೆನ್ಸ್‌) ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಸಾಂವಿಧಾನಿಕ ಹುದ್ದೆಗೆ ಚ್ಯುತಿ ಉಂಟು ಮಾಡಿದ್ದಾರೆ. ತಕ್ಷಣವೇ ಅವರು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

‘ಮುಖ್ಯಮಂತ್ರಿ ಗೋಪ್ಯತೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಗೋಪ್ಯತೆ ಪ್ರಮಾಣವಚನಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಭ್ರಷ್ಟರಿಗೆ ಮಾಹಿತಿ ನೀಡಿ ಭ್ರಷ್ಟಾಚಾರ ಮುಚ್ಚಿಹಾಕಲು ನೆರವಾಗಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಐಟಿ ದಾಳಿಯನ್ನು ರಾಜಕೀಯಪ್ರೇರಿತ ಎಂದು ಹೇಳುವುದೇ ಒಂದು ರಾಜಕಾರಣ. ಗುತ್ತಿಗೆದಾರರು, ಎಂಜಿನಿಯರುಗಳ ಕೇಂದ್ರೀಕೃತವಾಗಿ ಗುರುವಾರ ಐಟಿ ದಾಳಿ ನಡೆದಿದೆ. ಮುಂಗಡ ಕ್ರೋಢೀಕರಣ (ಮೊಬಿಲೈಸೆಷನ್‌ ಅಡ್ವಾನ್ಸ್‌) ಹೆಸರಿನಲ್ಲಿ ನೂರಾರು ಕೋಟಿ ನೀಡಲಾಗಿದೆ ಎಂಬ ಮಾಹಿತಿ ಆಧರಿಸಿ, ಆ ಹಣ ಚುನಾವಣಾ ಅಕ್ರಮಕ್ಕೆ ಬಳಕೆಯಾಗುತ್ತದೆ ಎಂಬ ಗುಮಾನಿ ಮೇಲೆ ದಾಳಿ ನಡೆಸಿದ್ದಾರೆ’ ಎಂದರು.

ADVERTISEMENT

‘ಐಟಿ ದಾಳಿ ವಿರುದ್ಧ ಕಾಂಗ್ರೆಸ್‌– ಜೆಡಿಎಸ್‌ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ನಾಚಿಗೇಡಿನ ಸಂಗತಿ. ಈ ಮೂಲಕ ಭ್ರಷ್ಟರಿಗೂ ಕಾಂಗ್ರೆಸ್‌–ಜೆಡಿಎಸ್‌ಗೂ ಸಂಬಂಧ ಗಾಢವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜನರ ಮುಂದೆ ಬೆತ್ತಲಾಗಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಜನರನ್ನು ಎತ್ತಿಕಟ್ಟುವ ಸಂಚು ಮಾಡಿದ್ದಾರೆ’ ಎಂದು ದೂಷಿಸಿದರು.

‘ರಾಜಕಾರಣಿಗಳ ಸಂಬಂಧಿಕ ಗುತ್ತಿಗೆದಾರರು, ಎಂಜಿನಿಯರುಗಳು ಸಂವಿಧಾನತೀತರೇ? ಸಂವಿಧಾನದಲ್ಲಿ ಅವರಿಗೆ ವಿಶೇಷ ಪ್ರಾತಿನಿಧ್ಯ ಇದೆಯೇ ಎಂದು ಮುಖ್ಯಮಂತ್ರಿ (ಕುಮಾರಸ್ವಾಮಿ), ಮಾಜಿಮುಖ್ಯಮಂತ್ರಿ (ಸಿದ್ದರಾಮಯ್ಯ) ಸ್ಪಷ್ಟಪಡಿಸಬೇಕು. ಭ್ರಷ್ಟರ ಪರವಾಗಿ ನಿಲ್ಲುವುದು ಸಂವಿಧಾನ ಎತ್ತಿಹಿಡಿಯುವ ಕೆಲಸವೇ’ ಎಂದು ಪ್ರಶ್ನಿಸಿದರು.

‘ರಾಜ್ಯದ ಸಾಲ ಮೂರು ಲಕ್ಷ ಕೋಟಿಗೆ ಏರಿದೆ. ರಾಜ್ಯದ ಖಜಾನೆ ಲೂಟಿ ಮಾಡಿ ನಿಮ್ಮ ಖಜಾನೆ ತುಂಬಿಸಿಕೊಳ್ಳುವುದಕ್ಕಲ್ಲ. ಭ್ರಷ್ಟಾಚಾರದ ‘ಕಿಂಗ್‌ಪಿನ್‌’ಗಳಂತೆ ಕೆಲಸ ಮಾಡುತ್ತಿದ್ದೀರಿ’ ಎಂದು ಆರೋಪಿಸಿದರು.

‘ಗುತ್ತಿಗೆ ಕಾಮಗಾರಿ, ಮುಂಗಡ ಕ್ರೋಢೀಕರಣ, ಮೊದಲಾದವುದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಆಗಬೇಕು. ರಾಜ್ಯಪಾಲರು, ಚುನಾವಣಾ ಆಯೋಗ ಮಧ್ಯೆ ಪ್ರವೇಶಿಸಬೇಕು. ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಬಳಿಯೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇದೆ ಎಂದು ಮಾಜಿ ಮುಖ್ಯಮಂತ್ರಿ (ಸಿದ್ದರಾಮಯ್ಯ) ಗಟರು ಹಾಕಿದ್ದಾರೆ. ಬೆದರಿಕೆ ತಂತ್ರಕ್ಕೆ ಬಗ್ಗಲ್ಲ’ ಎಂದರು.

ಬಿಜೆಪಿ ಮುಖಂಡರಾದ ಎಚ್‌.ಡಿ.ತಮ್ಮಯ್ಯ, ರವಿ ಇದ್ದರು.

‘ಹಗುರವಾಗಿ ಮಾತಾಡದಿರಿ’

‘ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಇಳಿದಿತ್ತು ರಾಷ್ಟ್ರೀಯ ಅಧ್ಯಕ್ಷರು ಹಣದ ಆಮಿಷವೊಡ್ಡಿದ್ದರು, ಅದು ಸಾಕಾರವಾಗದ್ದಕ್ಕೆ ಐಟಿ ದಾಳಿ ನಡೆಸಲಾಗಿದೆ ಎಂದು ಮಾಜಿ ಪ್ರಧಾನಿ (ಎಚ್‌.ಡಿ.ದೇವೇಗೌಡ) ಹೇಳಿದ್ದಾರೆ. ಈ ರೀತಿ ಹಗುರ ಹೇಳಿಕೆ ನೀಡುವುದು ಹಿರಿತನಕ್ಕೆ ಶೋಭೆ ತರಲ್ಲ’ ಎಂದು ಸಿ.ಟಿ.ರವಿ ಕುಟುಕಿದರು.

‘ರಾಷ್ಟ್ರೀಯ ಅಧ್ಯಕ್ಷರ ಜತೆಗಿನ ಮಾತುಕತೆ ಬಹಿರಂಗ ಮಾಡಿದರೆ ನಿಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ. ಪುತ್ರನಿಗೆ ಅಧಿಕಾರ ಸಿಗುತ್ತದೆ ಎಂದಾಕ್ಷಣ ಹೇಗೆ ಬದಲಾದಿರಿ ಎಂಬುದು ಗೊತ್ತು. ಹಗುರವಾಗಿ ಮಾತಾಡಬೇಡಿ. ಬಿಜೆಪಿ ಎರಡು ತಲೆ ಹಾವಲ್ಲ. ಅಧಿಕಾರಕ್ಕಾಗಿ ಹಾತೊರೆಯಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಬಗ್ಗೆ ಆಡಿದ್ದ ಮಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ’ ಎಂದು ಟಾಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.