ADVERTISEMENT

ದುರ್ಬಲ, ಪ್ರಚಾರಪ್ರಿಯ ಸರ್ಕಾರ: ಕೆ. ಹರೀಶ್ ಕುಮಾರ್ ಟೀಕೆ

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 16:18 IST
Last Updated 9 ಜೂನ್ 2021, 16:18 IST
ಹರೀಶ್‌ಕುಮಾರ್
ಹರೀಶ್‌ಕುಮಾರ್   

ಬೆಳ್ತಂಗಡಿ: ‘ರಾಜ್ಯ, ಕೇಂದ್ರ ಸರ್ಕಾರಗಳು ಕೋವಿಡ್‌ ನಿಯಂತ್ರಿಸಲು ಮತ್ತು ಲಸಿಕೆ ಹಂಚಿಕೆಯಲ್ಲಿ ಸಂಪೂರ್ಣ ವಿಫಲವಾಗಿವೆ. ಇವು ದುರ್ಬಲ, ಬೇಜವಾಬ್ದಾರಿಯುತ ಪ್ರಚಾರ ಪ್ರಿಯ ಸರ್ಕಾರಗಳಾಗಿವೆ’ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಟೀಕಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಸಿಕೆ ಉತ್ಪಾದನಾ ಕಂಪನಿಗಳಿಗೆ ಮುಂಗಡ ಹಣ ನೀಡುತ್ತಿದ್ದರೆ ಲಸಿಕೆಯ ಕೊರತೆ ಉಂಟಾಗುತ್ತಿರಲಿಲ್ಲ. ಬಿಜೆಪಿಗರು ಲಸಿಕೆಗೆ ಕಾಂಗ್ರೆಸ್ ಅಡ್ಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಲಸಿಕೆಗಾಗಿ ಬೆಳಿಗ್ಗೆ 3 ಗಂಟೆಗೆ ಜನ ಆಸ್ಪತ್ರೆ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. 250 ರಿಂದ 300 ಜನರಿಗೆ ಟೋಕನ್ ನೀಡಿದ ಬಳಿಕ 8 ಗಂಟೆಯ ಹೊತ್ತಿಗೆ ಬೇರೆಯೇ ಜನ ಟೋಕನ್ ಹಿಡಿದುಕೊಂಡು ಬಂದು ಲಸಿಕೆ ಪಡೆದುಕೊಂಡು ಹೋಗುತ್ತಾರೆ. ಸರದಿಯಲ್ಲಿ ನಿಂತವರು ಲಸಿಕೆ ಸಿಗದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ದುರಂತವಾಗಿದೆ’ ಎಂದು ಹೇಳಿದರು.

ADVERTISEMENT

‘ಬೆಡ್ ಹಗರಣದಲ್ಲಿ, ಲಸಿಕೆ ಮಾರಾಟದಲ್ಲಿ ಶಾಸಕರಾದಿಯಾಗಿ ಬಿಜೆಪಿ ಮುಖಂಡರು ಇದ್ದಾರೆ. ದೇಶದ ಜನತೆಗೆ ಉಚಿತ ಲಸಿಕೆ ನೀಡಲು ಬೇಕಾಗಿರುವುದು ₹ 65 ಸಾವಿರ ಕೋಟಿ. ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯಲ್ಲಿ ₹ 65 ಸಾವಿರ ಕೋಟಿಯನ್ನು ಜನರ ಆರೋಗ್ಯಕ್ಕಾಗಿ ನೀಡುತ್ತಿದ್ದರೆ ಇಂದು ಈ ದುಸ್ಥಿತಿ ಬರುತ್ತಿರಲಿಲ್ಲ’ ಎಂದರು.

‘ಇಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅವೈಜ್ಞಾನಿಕ ಲಾಕ್‍ಡೌನ್ ಮತ್ತು ಅಸಮರ್ಪಕ ಪ್ಯಾಕೇಜ್ ಘೋಷಣೆಯಾಗಿದೆ. ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕನಿಗೆ ಪ್ಯಾಕೇಜ್ ಪರಿಹಾರ ಇಲ್ಲದಾಗಿದೆ. ಜನ ಕೆಲಸವಿಲ್ಲದೆ, ಊಟಕ್ಕಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರ ಮನೆಮನೆಗೆ ಫುಡ್ ಪ್ಯಾಕೇಜ್ ಕೊಡುವ ಕೆಲಸವನ್ನು ಮಾಡಬೇಕಿತ್ತು’ ಎಂದು ಹೇಳಿದರು.

‘ಹಾಸಿಗೆ, ಆಮ್ಲಜನಕ, ಲಸಿಕೆ ಎಲ್ಲದಕ್ಕೂ ಈ ಸರ್ಕಾರಕ್ಕೆ ಕೋರ್ಟ್‌ ಆದೇಶ ನೀಡುವಂತಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪರಿಹಾರ, ನೆರೆ, ಬರ ಪರಿಹಾರ ಯಾವುದೂ ಬಂದಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಮೋದಿ ಮುಂದೆ ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಪರಿಹಾರ ತರದೇ ಇರುವುದರ ಹಿಂದೆ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುವ ಮರ್ಮವೂ ಇರಬಹುದು’ ಎಂದು ಲೇವಡಿ ಮಾಡಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ. ಚುನಾವಣೆ ಸಂದರ್ಭ ₹ 50 ಕ್ಕೆ ಪೆಟ್ರೋಲ್ ಕೊಡುತ್ತೇವೆ ಎಂದು ಬಿಜೆಪಿಗರು ಹೇಳಿದ್ದು ಇಂದು ನಿಜವಾಗಿದೆ. ಅವರು ಅರ್ಧ ಲೀಟರ್ ಪೆಟ್ರೋಲ್‍ಗೆ ಹೇಳಿದ್ದು ಎಂದು ಜನ ಅರ್ಥ ಮಾಡಿಕೊಳ್ಳಬೇಕು’ ಎಂದು ವ್ಯಂಗವಾಡಿದರು.

‘ಜಿಲ್ಲಾ ಕಾಂಗ್ರೆಸ್ ವತಿಯಿಂದ 13 ಉಚಿತ ಅಂಬ್ಯುಲೆನ್ಸ್, 1 ಕೋವಿಡ್ ಕೇರ್ ಸೆಂಟರ್ ಈಗಾಗಲೇ ಕಾರ್ಯಾಚರಿಸುತ್ತಿವೆ. ಹಲವಾರು ಫುಡ್ ಕಿಟ್ ಮತ್ತು ಮೆಡಿಸಿನ್ ಕಿಟ್‍ಗಳನ್ನು ವಿತರಿಸಿದ್ದೇವೆ. ಜಿಲ್ಲಾ ಕಾಂಗ್ರೆಸ್‍ನ ಯುವಕರು ಈಗಾಗಲೇ 65 ಶವ ಸಂಸ್ಕಾರ ಮಾಡಿದ್ದಾರೆ. ಇದೇ 20ರಂದು ಬೆಳ್ತಂಗಡಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ’ ಎಂದರು.

ಪಿಯು ಪರೀಕ್ಷೆ ರದ್ದು ಪಡಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅವೈಜ್ಞಾನಿಕ ಕ್ರಮ. ಹಿರಿಯ ವಿದ್ಯಾರ್ಥಿಗಳನ್ನು ಪಾಸ್ ಮಾಡಿ, ಕಿರಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಸ್ಯಾಸ್ಪದ. ರದ್ದು ಮಾಡುವುದಾದರೆ ಎರಡನ್ನು ರದ್ದು ಮಾಡಬೇಕು. ಪರೀಕ್ಷೆ ಮಾಡುವುದಾದರೆ ಎರಡನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ, ಮುಖಂಡರಾದ ಅಬ್ದುಲ್ ರಹಮಾನ್ ಪಡ್ಪು, ಜಗದೀಶ್ ಡಿ, ಬಿ.ಕೆ.ವಸಂತ್, ನಾಗರಾಜ ಲಾಯಿಲ, ಅನೀಲ್ ಪೈ, ಪವನ್ ಕುಮಾರ್, ಮೆಹಬೂಬ್, ಅಜಯ್, ಸಂದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.