ಕಡೂರು: ಕೆರೆಗಳು ರೈತರ ಜೀವನಾಡಿಯಾಗಿದ್ದು, ಅವುಗಳ ಉಳಿವಿನ ಮೂಲಕವೇ ರೈತರ ಬದುಕು ಹಸನಾಗಲು ಸಾಧ್ಯ ಎಂದು ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್ ಕ್ಯಾತನಬೀಡು ಹೇಳಿದರು.
ಸಖರಾಯಪಟ್ಟಣದ ಸಮೀಪ ಕೃಷಿಕ ರವೀಶ್ ಮನೆಯಂಗಳದಲ್ಲಿ ಕ್ಯಾತನಬೀಡು ಪ್ರತಿಷ್ಠಾನ ಗುರುವಾರ ಏರ್ಪಡಿಸಿದ್ದ ‘ರೈತರ ಬದುಕು ಮತ್ತು ಸಮಸ್ಯೆಗಳ ಕುರಿತು ಸಭೆ’ಯಲ್ಲಿ ಅವರು ಮಾತನಾಡಿದರು.
ದಶಕಗಳ ಹಿಂದೆ ಜನರ ಜೀವನಾಡಿಯಾಗಿದ್ದ ಲಕ್ಕಸಾಗರದ ಕೆರೆ ಇಂದು ಕಂಡೂ ಕಾಣದಂತಾಗಿದೆ. ಕೆರೆಯನ್ನು ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. 50 ಎಕರೆಯಷ್ಟಿರುವ ಈ ಕೆರೆ ತುಂಬಿದರೆ ಜಾನಸಾಲೆ ಮತ್ತು ಸುತ್ತಮುತ್ತಲೂ 20 ಕಿ.ಮೀ. ವ್ಯಾಪ್ತಿಯ ಕೃಷಿ ಚಟುವಟಿಕೆಗಳ ಜಲಮೂಲವಾಗಿತ್ತು. ಆದರೆ, ಇಲ್ಲಿ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನೀಲಗಿರಿ ನೆಡುತೋಪಿನ ಕಾರಣದಿಂದ ಕೆರೆ ಅವಸಾನದ ಅಂಚಿನಲ್ಲಿದೆ. ಸರ್ಕಾರ ಮತ್ತು ಸಣ್ಣ ನೀರಾವರಿ ಇಲಾಖೆಯು ಲಕ್ಕಸಾಗರ ಕೆರೆಯನ್ನು ಅಭಿವೃದ್ಧಿ ಪಡಿಸಿ, ಗುಡ್ಡಗಳ ನೀರು ಕೆರೆಗೆ ಹರಿಯುವಂತೆ ಮಾಡಬೇಕು ಎಂದರು.
ಸಭೆ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಗುರುಶಾಂತಪ್ಪ, ‘ಜಿಲ್ಲೆಯಲ್ಲಿ ಹುಟ್ಟುವ ನದಿಗಳು ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹರಿದು ಆ ನೆಲವನ್ನು ಸಂಪದ್ಭರಿತ ಗೊಳಿಸುತ್ತಿವೆ. ಆದರೆ, ಜಿಲ್ಲೆಯ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆರೆಕಟ್ಟೆಗಳು ದಿನೇ ದಿನೇ ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವತ್ತ ರೈತರು ಚಿಂತನೆ ಮಾಡಬೇಕಿದೆ’ ಎಂದರು.
ಸಿಪಿಐ ರಾಜ್ಯ ಸಹಕಾರ್ಯದರ್ಶಿ ಅಮ್ಜದ್ ಮಾತನಾಡಿ, ಸಾಲದ ಕುಣಿಕೆ ಮತ್ತು ಸರ್ಕಾರಗಳ ಕಡೆಗಣನೆಯಿಂದ ಬೇಸತ್ತು ರೈತ ಕುಟುಂಬಗಳು ಹಿಂದೆ ಬಿದ್ದಿವೆ. ರೈತರು ಎಚ್ಚೆತ್ತು ಭೂಮಿಯ ಫಲವತ್ತತೆ ಕಾಪಾಡಿಕೊಂಡು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಕೃಷಿಕ ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರಾದ ರವೀಶ್, ಎನ್. ಡಿ.ಚಂದ್ರಪ್ಪ, ಡಿ.ಎಂ.ಮಂಜುನಾಥಸ್ವಾಮಿ, ಪಿಳ್ಳೇನಹಳ್ಳಿ ವಿಜಯಕುಮಾರ್, ಗಂಗಾಧರ ಶಿವಪುರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.