ಕಡೂರು: ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿವಿಧ ಸಾಂಸ್ಕೃತಿಕ ಘಟಕಗಳು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಕಲ್ಪನೆಯ ಕೊರತೆಯಿಂದ ಹೊಸದಾಗಿ ಕಾಲೇಜುಗಳನ್ನು ಆರಂಭಿಸಿ ಅನಾಥವಾಗಿಸುವುದಕ್ಕಿಂತ ಇರುವ ವ್ಯವಸ್ಥೆ ಬಲಗೊಳಿಸುವ, ಅಗತ್ಯವಿರುವಲ್ಲಿ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು. ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಹಾಗೂ ಆತ್ಮವಿಶ್ವಾಸ ಗುಣ ಹೆಚ್ಚಿಸುವ ಬೋಧನಾ ವ್ಯವಸ್ಥೆ ಇರಬೇಕು ಎನ್ನುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ತಕ್ಕ ಪಠ್ಯಕ್ರಮ ರೂಪಿಸಲಾಗುತ್ತಿದೆ. ವಾಣಿಜ್ಯ ವಿಭಾಗದಲ್ಲಿ ರೀಟೇಲ್ ಶಿಕ್ಷಣ, ಆನ್‌ಲೈನ್ ಉದ್ಯಮ, ಸ್ಟಾರ್ಟ್‌ಅಪ್‌ಗಳ ಮೂಲಕ ಬದುಕು ಕಟ್ಟಿಕೊಳ್ಳುವ ರೀತಿಯ ಬೋಧನಾ ಕ್ರಮಗಳ ಕಲಿಕೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ವಿದೇಶೀ ವಿಶ್ವವಿದ್ಯಾಲಯಗಳ ಪದವಿಗಳು ಇಲ್ಲಿಯೇ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಹಮ್ಮಿಕೊಂಡ ಯೋಜನೆಗಳ ಅಂಗವಾಗಿ ಈಗಾಗಲೇ ಬೆಂಗಳೂರಿನಲ್ಲಿ ಬ್ರಿಟನ್‌ನ ಇಂಪೀರಿಯಲ್ ರೀಸರ್ಚ್ ವಿವಿ, ಲಿವರ್‌ಪೂಲ್ ವಿವಿಗಳು ಪದವಿ ತರಗತಿಗಳನ್ನು ಆರಂಭಿಸಿವೆ. ಮುಂದಿನ ವರ್ಷದ ಹೊತ್ತಿಗೆ ಮ್ಯಾಂಚೆಸ್ಟರ್ ವಿವಿ ಕೂಡಾ ಹಬ್ ಆರಂಭಿಸಲಿದೆ. ವಿವಿಧ ಯೋಜನೆಗಳಲ್ಲಿ ರಾಜ್ಯದ 6 ವಿವಿಗಳ ತಲಾ 5 ವಿದ್ಯಾರ್ಥಿಗಳು ಈಸ್ಟ್ ಲಂಡನ್‌ನ ವಿವಿಧ ಕಾಲೇಜುಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಭೇಟಿ ನೀಡಿ, ತಮ್ಮ ಅನುಭವ ಹೆಚ್ಚಿಸಿಕೊಂಡಿದ್ದಾರೆ. ವಿವಿಧ ಒಡಂಬಡಿಕೆಗಳಿಂದ ವಿದೇಶಗಳಲ್ಲಿ ಮೂರು ವರ್ಷ ಉಚಿತ ಶಿಕ್ಷಣ ವ್ಯವಸ್ಥೆಗೆ ಹಲವು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್, ಕಡೂರು ಕಾಲೇಜು ಹೆಚ್ಚುವರಿ ಕೊಠಡಿಗಳಿಗೆ ಮತ್ತು ಶೀಟ್ ಹಾಕಿಸಲು ₹3 ಕೋಟಿ ಹಣ ಮಂಜೂರು ಮಾಡಬೇಕು. ಈ ಕಾಲೇಜನ್ನು ಸ್ಥಳಾಂತರಿಸುವ ಚಿಂತನೆ ನಡೆಸಿದ್ದು, ಹೊಸ ಜಾಗ ಗುರುತಿಸಿದೆ. ಕಟ್ಟಡಕ್ಕೆ ಸಂಬಂಧಿಸಿದಂತೆ ₹5 ಕೋಟಿ ಹಣವೂ ಇದೆ. ಆದರೆ ಸದರಿ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು, ಸಂಬಂಧಿಸಿದ ಅರ್ಜಿ ಅರಣ್ಯ ಸಚಿವರ ಲಾಗಿನ್‌ನಲ್ಲಿ ಇದೆ. ಉನ್ನತ ಶಿಕ್ಷಣ ಸಚಿವರು ಅರಣ್ಯ ಸಚಿವರೊಂದಿಗೆ ವ್ಯವಹರಿಸಿ ಜಾಗ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಮತ್ತು ಮಹಿಳಾ ಕಾಲೇಜಿಗೆ ತಲಾ ₹2 ಕೋಟಿ ಅನುದಾನ ಮಂಜೂರು ಮಾಡಿರುವುದಕ್ಕೆ ಸಚಿವರನ್ನು ಅಭಿನಂದಿಸುವುದಾಗಿ ತಿಳಿಸಿ, ಕಡೂರು ಶಾಸಕರ ಕೋರಿಕೆಗೆ ತಮ್ಮ ಸಹಮತವಿದೆ ಎಂದರು.
ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಕೇಶವ. ಎಚ್., ಪ್ರಾಂಶುಪಾಲ ಡಾ.ರಾಜಣ್ಣ ಕೆ.ಎ, ಪುರಸಭೆ ಸದಸ್ಯ ಮಾನಿಕ್ ಬಾಷಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.