ADVERTISEMENT

ಬನ್ನಿ ಮಂಟಪಕ್ಕೆ ಹೊಸರೂಪ: ಶಾಸಕ ಆನಂದ್‌

ಕಡೂರು ದೊಡ್ಡಪೇಟೆಯಲ್ಲಿರುವ ಬನ್ನಿ ಮಂಟಪದ ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:47 IST
Last Updated 21 ಫೆಬ್ರುವರಿ 2026, 6:47 IST
ಕಡೂರು ದೊಡ್ಡಪೇಟೆಯಲ್ಲಿರುವ ಬನ್ನಿ ಮಂಟಪದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಕೆ.ಎಸ್.ಆನಂದ್ ಗುರುವಾರ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್, ಈರಳ್ಳಿ ರಮೇಶ್, ಶರತ್‌ ಕೃಷ್ಣಮೂರ್ತಿ ಭಾಗವಹಿಸಿದ್ದರು
ಕಡೂರು ದೊಡ್ಡಪೇಟೆಯಲ್ಲಿರುವ ಬನ್ನಿ ಮಂಟಪದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಕೆ.ಎಸ್.ಆನಂದ್ ಗುರುವಾರ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್, ಈರಳ್ಳಿ ರಮೇಶ್, ಶರತ್‌ ಕೃಷ್ಣಮೂರ್ತಿ ಭಾಗವಹಿಸಿದ್ದರು   

ಕಡೂರು: ‘ಕಡೂರು ದೊಡ್ಡಪೇಟೆಯ ಬನ್ನಿಮರವನ್ನು ನಮ್ಮ ಪೂರ್ವಿಕರು ಪೂಜಿಸುತ್ತ ಬಂದಿದ್ದು, ತಾಲ್ಲೂಕು ಆಡಳಿತದ ವತಿಯಿಂದಲೇ ಇಲ್ಲಿ ವಿಜಯ ದಶಮಿಯಂದು ಅಂಬು ಹೊಡೆಯುವ ಪದ್ಧತಿ ನಡೆದುಕೊಂಡು ಬಂದಿದೆ. ಇಂತಹ ಪವಿತ್ರ ಬನ್ನಿಮರದ ಸುತ್ತ ಮಂಟಪ ನಿರ್ಮಿಸಿ, ಜೀರ್ಣೋದ್ಧಾರದ ಮೂಲಕ ಹೊಸರೂಪ ನೀಡಲು ಮುಂದಾಗಿರುವ ಸಮಿತಿಗೆ ಸಹಕಾರ ನೀಡುವುದಾಗಿ’ ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಪಟ್ಟಣದ ಛತ್ರದ ಬೀದಿಯಲ್ಲಿರುವ ಶ್ರೀಬನ್ನಿಮಂಟಪ ಸೇವಾ ಸಮಿತಿಯವರು ಬನ್ನಿಮರದ ಬಳಿ ನೂತನ ಮಂಟಪ ನಿರ್ಮಿಸಲು ಗುರುವಾರ ಆಯೋಜಿಸಿದ್ದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇತಿಹಾಸ ಹೊಂದಿರುವ ಈ ಬನ್ನಿಮರದ ಸುತ್ತಮುತ್ತ ಅನೇಕ ಧರ್ಮ, ಜನಾಂಗದ ಜನರು ವಾಸವಾಗಿದ್ದಾರೆ. ಬನ್ನಿಮರದ ಪೂಜಾ ಕೈಂಕರ್ಯಗಳಿಗೆ ಚ್ಯುತಿ ಬಾರದಂತೆ ವ್ಯವಸ್ಥೆ ನಡೆದುಕೊಂಡು ಬಂದಿದೆ. ಸರ್ಕಾರದ ಪ್ರತಿನಿಧಿ ವಿಜಯ ದಶಮಿಯಂದು ಇಲ್ಲಿ ಅಂಬು ಹೊಡೆಯುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಯುವಕರು ಸಂಪ್ರದಾಯ ಉಳಿಸುವ ಜತೆಗೆ, ಇದೇ ಬೀದಿಯಲ್ಲಿರುವ ಶ್ರೀವೀರಭದ್ರೇಶ್ವರ ಸ್ವಾಮಿಯ ದೇವಾಲಯ ಪ್ರಾಂಗಣಕ್ಕೆ ಕಲ್ಲಿನ ಕಟ್ಟಡವನ್ನು ನಿರ್ಮಿಸಲು ಮುಂದಾದರೆ ಆ ಕಾರ್ಯಕ್ಕೂ ಸಹಕಾರ ನೀಡುತ್ತೇನೆ ಎಂದರು.

ADVERTISEMENT

ಶ್ರೀಬನ್ನಿ ಮಂಟಪ ಸೇವಾ ಸಮಿತಿಯ ಅಧ್ಯಕ್ಷ ಈರಳ್ಳಿ ರಮೇಶ್ ಮಾತನಾಡಿ, ‘ಹಿಂದಿನಿಂದಲೂ ತಾಲ್ಲೂಕು ಆಡಳಿತ ಸಹಯೋಗದಿಂದ ಅಂಬು ಹೊಡೆಯುತ್ತ ಬಂದಿರುವ ಜತೆಗೆ ಪೂಜೆ ನಡೆಸಿಕೊಂಡು ಬಂದಿರುವ ಬನ್ನಿಮರದ ಕಟ್ಟಡವು ಶಿಥಿಲಗೊಂಡಿದೆ. ಸೇವಾ ಸಮಿತಿ ಮತ್ತು ಸುತ್ತಲೂ ವಾಸವಿರುವ ಸರ್ವಧರ್ಮೀಯರ ಸಹಕಾರದಿಂದ ₹30 ಲಕ್ಷ ವೆಚ್ಚದಲ್ಲಿ ನೂತನ ಬನ್ನಿ ಮಂಟಪ ನಿರ್ಮಿಸಲು ಆರಂಭಿಸಲಾಗಿದೆ. ಅದಕ್ಕಾಗಿ ಎಲ್ಲರ ಸಹಕಾರವನ್ನು ಸಮಿತಿ ಬಯಸುತ್ತದೆ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಾತನ ಬನ್ನಿ ಮಂಟಪದ ಸ್ಥಳದಲ್ಲಿ ಮುಜರಾಯಿ ಇಲಾಖೆಯಿಂದ ಕೋಟೆಯಲ್ಲಿರುವ ಶ್ರೀಚನ್ನಕೇಶ್ವರ ಸ್ವಾಮಿಯವರನ್ನು ಕರೆತಂದು ಅಂಬು ಹೊಡೆದು ಬನ್ನಿ ಮುಡಿಯುವುದು ಸಂಪ್ರದಾಯವಾಗಿದೆ. ಈಗ ಕಟ್ಟಡ ದುರಸ್ತಿ ಮಾಡಲು ಸಮಿತಿ ಮುಂದಾಗಿರುವುದಕ್ಕೆ ಭಕ್ತರ ಸಹಕಾರ ಇರುತ್ತದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಶರತ್‌ ಕೃಷ್ಣಮೂರ್ತಿ, ಬನ್ನಿ ಮರದ ಕಟ್ಟಡ ಜೀರ್ಣೋದ್ಧಾರದ ಬಗ್ಗೆ ಸಮಿತಿಯವರು ಕೈಗೊಂಡಿರುವ ನಿರ್ಣಯ ಉತ್ತಮವಾಗಿದೆ. ಧಾರ್ಮಿಕ ಕಾರ್ಯಗಳಿಗೆ ಇಲ್ಲಿನ ಎಲ್ಲಾ ಧರ್ಮೀಯರ ಸಹಕಾರ ಇದೆ ಎಂದರು.

ಈ ಸಂದರ್ಭದಲ್ಲಿ ತೋಟದ ಮನೆ ಮೋಹನ್‌ಕುಮಾರ್, ಭರತ್ ಕೆಂಪರಾಜ್, ಕಂಸಾಗರ ಸೋಮಶೇಖರ್, ಮಂಜುನಾಥ್, ಚೇತನ್‌ದೇವರ ಕುರಿ, ರಾಜು, ಪ್ರದೀಪ್, ಮನು ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಮಹಿಳೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.