ಕಡೂರು : ಪಟ್ಟಣದ ಸಾರಿಗೆ ಡಿಪೊ ಆವರಣದಲ್ಲಿ ಸುಮಾರು ₹1.15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾರಿಗೆ ಸಿಬ್ಬಂದಿ ವಸತಿಗೃಹಗಳ ಬಹುತೇಕ ಮನೆಗಳಲ್ಲಿ ಅಳವಡಿಸಿದ್ದ ಟೈಲ್ಸ್‌ಗಳು ಸಡಿಲಗೊಂಡಿದ್ದು, ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಈ ಮನೆಗಳನ್ನು ಬುಧವಾರ ಸಾರಿಗೆ ಸಚಿವರು ಉದ್ಘಾಟಿಸಲಿದ್ದಾರೆ.
2022-23ನೇ ಸಾಲಿನ ಟಿಎಸ್‌ಪಿ ಅನುದಾನದಲ್ಲಿ ನಿರ್ಮಿಸಿರುವ ಮನೆಗಳ ಬಾಗಿಲು ಅಳವಡಿಸಿದ ಗೋಡೆ ಬಿರುಕು ಬಿಟ್ಟಿದೆ. ನೆಲಕ್ಕೆ ಅಳವಡಿಸಿದ ಟೈಲ್ಸ್‌ಗಳು ಕಿತ್ತು ಬಂದು ಕೆಲವು ಒಡೆದಿವೆ. ಮೂರು ನಾಲ್ಕು ತಿಂಗಳಿನಿಂದ ಇದೇ ವಸತಿ ನಿಲಯದಲ್ಲಿ ಕೆಲವು ಸಿಬ್ಬಂದಿ ವಾಸವಿದ್ದಾರೆ. ಮನೆಯ ಗೋಡೆಗಳು ನೀರಿನ ತೇವಾಂಶಕ್ಕೆ ಸೋರುವ ಸ್ಥಿತಿಯಲ್ಲಿವೆ. ಸರಿಯಾದ ಕ್ಯೂರಿಂಗ್ ನಿರ್ವಹಿಸದೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಕಡೂರಿಗೆ ಬುಧವಾರ ಭೇಟಿ ನೀಡಲಿರುವ ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ ಈ ವಸತಿಗೃಹಗಳನ್ನು ಉದ್ಘಾಟಿಸಲಿದ್ದಾರೆ. ಸಚಿವರು ಪಟ್ಟಣದ ಬಸ್ ನಿಲ್ದಾಣದ ಬಳಿ ಶಂಕು ಸ್ಥಾಪನೆ ಹಾಗೂ ವಸತಿಗೃಹಗಳನ್ನು ಉದ್ಘಾಟಿಸುವ ಮಾಹಿತಿ ಲಭ್ಯವಾಗಿದೆ. ಅವರು ಸ್ಥಳ ಪರಿಶೀಲನೆ ನಡೆಸಲಿ ಎಂದು ಕೆಲವು ನಿವಾಸಿಗಳು ಆಗ್ರಹಿಸಿದ್ದಾರೆ.
ವಸತಿ ಗೃಹದ ಸಮಸ್ಯೆಯ ಬಗ್ಗೆ ಮೂರು ತಿಂಗಳಿನಿಂದ ಇಲಾಖೆಯ ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗೋಡೆ ಶಿಥಿಲಗೊಂಡಿರುವ ಕಾರಣ ವಾಸಿಸಲು ಭಯಪಡುವಂತಾಗಿದೆ. ಸಣ್ಣ ಮಕ್ಕಳೂ ಇಲ್ಲಿ ಇದ್ದಾರೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು.
ವಸತಿ ಗೃಹದ ಸಮಸ್ಯೆಯನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ವಸತಿ ಗೃಹದ ಕೆಲವು ಕಾಮಗಾರಿ ಪೂರ್ಣಗೊಳಿಸದ ಕಾರಣ ಅಂತಿಮ ಬಿಲ್ ಬಾಕಿ ಉಳಿಸಿಕೊಂಡಿದ್ದು, ವಸತಿಗೃಹದ ಸಮಸ್ಯೆ ಶೀಘ್ರ ಸರಿಪಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಕಾಮಗಾರಿ ಎಂಜಿನಿಯರ್ ಶ್ರೀಧರ ಸ್ವಾಮಿ ತಿಳಿಸಿದರು.
‘ಇಎಂಡಿ ಹಣಕ್ಕೆ ತಡೆ’
ಗುತ್ತಿಗೆದಾರನಿಗೆ ನಿಗಮವು ಶೇ 7.5 ಇಎಂಡಿ ಹಣ ನೀಡಬೇಕು ಕಾಮಗಾರಿಯನ್ನು ಸಮರ್ಪಕಗೊಳಿಸದಿರುವ ಬಗ್ಗೆ ಅದನ್ನು ತಡೆಹಿಡಿಯಲಾಗಿದೆ. ಅವರು ಕಾಮಗಾರಿ ನಿರ್ವಹಿಸದಿದ್ದರೆ ನಿಗಮದ ಹಣದಲ್ಲಿ ಸರಿಪಡಿಸಿ ಉಳಿದ ಹಣವನ್ನು ಅವರ ಮೂರು ವರ್ಷಗಳ ನಿರ್ವಹಣಾ ಅವಧಿ ಮುಗಿದ ನಂತರ ಬಾಕಿಯಾಗಿ ಪಾವತಿಸಲಾಗುವುದು ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಪ್ರದೀಪ್ ಬಿ.ಎಂ. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.