ADVERTISEMENT

ಅರ್ಹರಿಗೆ ಸೌಲಭ್ಯ; ಆಯೋಗ ಪರಿಶೀಲನೆ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:24 IST
Last Updated 14 ಮೇ 2022, 2:24 IST
ಕಡೂರಿಗೆ ಬಂದಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಶಾಸಕ ಬೆಳ್ಳಿಪ್ರಕಾಶ್ ಅಭಿನಂದಿಸಿದರು. ಸದಸ್ಯ ಬಿ.ಎಸ್. ರಾಜಶೇಖರ್, ಸೋಮಶೇಖರ್, ಜೆ. ಉಮೇಶ್, ವಕೀಲ ಎಂ.ಎಸ್. ಹೆಳವಾರ್ ಇದ್ದರು.
ಕಡೂರಿಗೆ ಬಂದಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಶಾಸಕ ಬೆಳ್ಳಿಪ್ರಕಾಶ್ ಅಭಿನಂದಿಸಿದರು. ಸದಸ್ಯ ಬಿ.ಎಸ್. ರಾಜಶೇಖರ್, ಸೋಮಶೇಖರ್, ಜೆ. ಉಮೇಶ್, ವಕೀಲ ಎಂ.ಎಸ್. ಹೆಳವಾರ್ ಇದ್ದರು.   

ಕಡೂರು: ‘ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಿಂದ ಹಲವಾರು ಸಣ್ಣ ಪುಟ್ಟ ಜಾತಿಗಳು ಬಿಟ್ಟು ಹೋಗಿದ್ದು, ಅರ್ಹ ಜನಾಂಗಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಮಾಹಿತಿ ನೀಡುವಂತೆ ಆಯೋಗ ಸೂಚಿಸಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೈಬಿಟ್ಟು ಹೋಗಿರಬಹುದಾದ ಜಾತಿಗಳ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು. ಇದರ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಮಾಹಿತಿ ದೊರಕಬೇಕೆಂಬ ಆಶಯದಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಆಯೋಗದಿಂದ ಪ್ರವಾಸ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

‘ದೇವರಾಜ ಅರಸು ನಿಗಮ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಬರುವ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಪರಿಶೀಲಿಸಲು ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಸಾಮಗ್ರಿಗಳನ್ನು ವಿತರಣೆ ಮಾಡಿ ದ್ದರೂ ವಿದ್ಯುತ್ ಸಂಪರ್ಕ ದೊರಕಿಲ್ಲದಿ ರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಬಿಸಿಎಂ ಇಲಾಖೆಯ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿಯ ಸೌಲಭ್ಯಗಳು ಮತ್ತು ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದರು.

ಶಾಸಕ ಬೆಳ್ಳಿಪ್ರಕಾಶ್ ಆಯೋಗದ ಅಧ್ಯಕ್ಷರನ್ನು ಅಭಿನಂದಿಸಿದರು. ಆಯೋ ಗದ ಸದಸ್ಯ ಬಿ.ಎಸ್. ರಾಜಶೇಖರ್, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಜೆ. ಉಮೇಶ್, ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್, ಹಿರಿಯ ವಕೀಲ ಎಂ.ಎಸ್. ಹೆಳವರ, ಟಿ.ಆರ್. ಲಕ್ಕಪ್ಪ ಇದ್ದರು.

ಮನವಿ ಸಲ್ಲಿಕೆ: ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಸಾಮಾಜಿಕ ನ್ಯಾಯದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಕಾಂತರಾಜು ಆಯೋಗದ ವರದಿ ಅಂಗೀಕರಿಸಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ನ್ಯಾಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಡಿಎಸ್‌ಎಸ್ ಮುಖಂಡರು ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.