ಕಡೂರು: ‘ಕ್ಷೇತ್ರದ ಜನರು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ನನ್ನ ಮೇಲೆ ಇಟ್ಟಿರುವ ಭರವಸೆ ಹಾಗೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಪಟ್ಟಣ ಹೊರವಲಯದ ಕಡೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿ ಶುಕ್ರವಾರ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಉಪವಿಭಾಗ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
2 ವರ್ಷದಲ್ಲಿ ಸರ್ಕಾರ ನಮ್ಮ ಕ್ಷೇತ್ರಕ್ಕೆ ಗ್ರಾಮೀಣ ಪ್ರದೇಶದ ರಸ್ತೆಗಳು, ಸಮುದಾಯ ಭವನಗಳ ನಿರ್ಮಾಣ, ದೇವಾಲಯಗಳ ಅಭಿವೃದ್ಧಿ, ಬಸ್ ತಂಗುದಾಣ, ಆಟೊ, ಟ್ಯಾಕ್ಸಿ ನಿಲ್ದಾಣಗಳ ನಿರ್ಮಾಣಕ್ಕೆ ₹50 ಕೋಟಿಯಷ್ಟು ಅನುದಾನ ನೀಡಿದೆ. ಎಲ್ಲಾ ಕಾಮಗಾರಿಗಳೂ ಕೆಆರ್‌ಐಡಿಎಲ್ ಮೂಲಕವೇ ಅನುಷ್ಠಾನಗೊಂಡು ನಿಗದಿತ ಕಾಲಮಿತಿಯಲ್ಲಿ ಬಹುತೇಕ ಮುಕ್ತಾಯಗೊಂಡಿವೆ. 220ಕ್ಕೂ ಹೆಚ್ಚು ಹಳ್ಳಿಗಳ ಒಳಭಾಗಗಳ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಜಿಲ್ಲಾ ಕೇಂದ್ರ ಮತ್ತು ಕಡೂರಿಗೆ ಜವಳಿ ಪಾರ್ಕ್ ಮಂಜೂರಾಗಿದೆ. ಮಹಿಳೆಯರ ನಿರೀಕ್ಷೆಗೆ ಒತ್ತಾಸೆಯಾಗಿ ಇನ್ನು ಮಾರ್ನಾಲ್ಕು ತಿಂಗಳಲ್ಲಿ ಕಡೂರಿನಲ್ಲಿ ಗಾರ್ಮೆಂಟ್ ಕಾರ್ಯಾರಂಭ ಮಾಡಲಿದ್ದು, ಮೊದಲ ಹಂತದಲ್ಲಿ 3 ಸಾವಿರ ಮಹಿಳೆಯರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದರು.
ಬೀರೂರು ಪಟ್ಟಣದಲ್ಲಿ ₹25 ಲಕ್ಷ ವೆಚ್ಚದಲ್ಲಿ ಹೂವಿನ ಮಾರುಕಟ್ಟೆ, ಯಗಟಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣ, 9 ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸಂಸದ ಜೈರಾಂ ರಮೇಶ್ ಅವರ ₹1 ಕೋಟಿ ಅನುದಾನದಲ್ಲಿ ಮತಿಘಟ್ಟ, ಕುಂಕಾನಾಡು, ಜಿಗಣೇಹಳ್ಳಿ, ತಂಗಲಿಯಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವ ಯುವಜನರಿಗೆ ನಗದಿಯಾತ್ ಕಾವಲಿನಲ್ಲಿ ಸ್ಥಳಾವಕಾಶ ಕಲ್ಪಿಸುವ ಮೂಲಕ ಪ್ರೋತ್ಸಾಹಿಸುವ ಉದ್ದೇಶವಿದೆ ಎಂದರು.
ಶಿಲಾಫಲಕ ಅನಾವರಣಗೊಳಿಸಿದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಕಟ್ಟಡವನ್ನು ಮಾದರಿಯಾಗಿ ನಿರ್ಮಿಸಲಾಗಿದೆ ಎಂದು ಶ್ಲಾಘಿಸಿ, ಕೆಆರ್‌ಐಡಿಎಲ್ ಇದೇ ರೀತಿ ಕಾಮಗಾರಿಯಲ್ಲಿ ಗುಣಮಟ್ಟದ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಭದ್ರಾ ಉಪಕಣಿವೆ ಯೋಜನೆಯ 3ನೇ ಹಂತಕ್ಕೆ ₹407 ಕೋಟಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಕರೆಸಿ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು. ವಿರೋಧಿಗಳು ಅಪಹಾಸ್ಯ ಮಾಡಿದ್ದ ಎತ್ತಿನಹೊಳೆ ಯೋಜನೆಯ ಫಲವಾಗಿ ಚಿಕ್ಕಮಗಳೂರು ವಲಯದ ಹಳೇಬೀಡು, ಬೆಳವಾಡಿ, ಮಾಚಗೊಂಡನಹಳ್ಳಿ ಮೊದಲಾದ ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಆರ್‌ಐಡಿಎಲ್ ಮೈಸೂರು ವಲಯ ಸುಪರಿಂಟೆಂಡೆಂಟ್ ಎಂಜಿನಿಯರ್ ಜಿ. ಗೋಪಾಲಪ್ಪ ಅವರು, 30 ಗುಂಟೆ ಜಾಗ ಖರೀದಿ ಸೇರಿ ₹1.39 ಕೋಟಿ ವೆಚ್ಚದಲ್ಲಿ ಉಪವಿಭಾಗ ಕಚೇರಿಯ ಕಟ್ಟಡ ನಿರ್ಮಿಸಲಾಗಿದ್ದು ನಿಗಮದ ವತಿಯಿಂದ ವೆಚ್ಚ ಭರಿಸಲಾಗಿದೆ ಎಂದು ತಿಳಿಸಿದರು.
ಕಡೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್. ಪ್ರವೀಣ್, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ, ನಿಗಮದ ಇಇ ಅಶ್ವಿನಿ ವಿ.ಎನ್, ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಕಡೂರಹಳ್ಳಿ ಉಪಾಧ್ಯಕ್ಷ ರಾಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್, ರವಿ, ಶಿಲ್ಪಾ, ರಂಜಿತಾ, ನಿಗಮದ ಎಂಜಿನಿಯರ್‌ಗಳಾದ ಮುರಳಿ, ಪುನೀತ್, ತೇಜಸ್, ಲಿಂಗರಾಜ್, ಯಗಟಿ ಗಿರೀಶ್ ಭಾಗವಹಿಸಿದ್ದರು.
Highlights - ಕೆಆರ್‌ಐಡಿಎಲ್ ಮೂಲಕ ₹50 ಕೋಟಿ ಕಾಮಗಾರಿ ಕಡೂರಿನಲ್ಲಿ ಗಾರ್ಮೆಂಟ್ ಶೀಘ್ರ ಆರಂಭ: ಸಾವಿರಾರು ಮಹಿಳೆಯರಿಗೆ ಉದ್ಯೋಗ ಕಡೂರು– ಬೀರೂರು ಬಸ್ ನಿಲ್ದಾಣಗಳ ಅಭಿವೃದ್ಧಿಗೆ ₹15 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.