ADVERTISEMENT

ಕಡೂರು ಸಾರ್ವಜನಿಕ ಆಸ್ಪತ್ರೆ: ಸ್ಕ್ಯಾನಿಂಗ್ ಸೌಲಭ್ಯ ಇಲ್ಲದೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 13:50 IST
Last Updated 7 ಮಾರ್ಚ್ 2025, 13:50 IST
ಕಡೂರು ಸಾರ್ವಜನಿಕ ಆಸ್ಪತ್ರೆ
ಕಡೂರು ಸಾರ್ವಜನಿಕ ಆಸ್ಪತ್ರೆ   

ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ಅಗತ್ಯ ಸೌಲಭ್ಯಗಳು ಇಲ್ಲದೆ, ರೋಗಿಗಳಿಗೆ ತೊಂದರೆ ಉಂಟಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾಗಿರುವ ಸಿಟಿ ಸ್ಕ್ಯಾನಿಂಗ್ ಸವಲತ್ತು ಇಲ್ಲ. ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ಕಡೂರು ಪಟ್ಟಣದಲ್ಲಿ ಈ ಸೌಲಭ್ಯ ತುರ್ತಾಗಿ ಬೇಕಾಗಿದೆ. ಅಪಘಾತದಂಥ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವವರು ಜಿಲ್ಲಾ ಕೇಂದ್ರಕ್ಕೆ ತರಳಬೇಕಾದ ಪರಿಸ್ಥಿತಿ ಇದೆ.

ಈ ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಇಲ್ಲದೆ ಸುಮಾರು ಏಳು ವರ್ಷಗಳು ಕಳೆದಿವೆ. ರೇಡಿಯಾಲಜಿಸ್ಟ್ ನಿಯೋಜನೆ ಆಗಿಲ್ಲ. ಹಿಂದೆ ಇದ್ದ ಅಲ್ಟ್ರಾಸ್ಕ್ಯಾನಿಂಗ್ ಯಂತ್ರ ಹಲವು ದಿನಗಳಿಂದ ಉಪಯೋಗವಾಗದೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ.

ADVERTISEMENT

ಗರ್ಭಿಣಿಯರು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಆಸ್ಪತ್ರೆ ಅಥವಾ ಖಾಸಗಿ ಕ್ಲಿನಿಕ್‌ಗಳನ್ನೇ ಅವಲಂಬಿಸಬೇಕಾಗಿದೆ. ಬಡ ಜನತೆಗೆ ಇದು ಹೊರೆಯಾಗಿ ಪರಿಣಮಿಸಿದೆ. ಪ್ರತಿನಿತ್ಯ ಖಾಸಗಿ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ 15ಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ಇಲ್ಲಿ ₹1,500 ರಿಂದ ₹2ಸಾವಿರದವರೆಗೆ ಶುಲ್ಕ ನೀಡಬೇಕಾಗುತ್ತದೆ. ಇದೇ ಸೌಲಭ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಭಿಸಿದರೆ ಬಡ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ ಎಂದು ರೋಗಿಗಳು ಅಳಲು ತೋಡಿಕೊಂಡರು.

ಸಾರ್ವಜನಿಕ ಆಸ್ಪತ್ರೆಗೆ ತಪಾಸಣೆಗಾಗಿ ಬರುವ ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಸಾರ್ವಜನಿಕ ಆಸ್ಪತ್ರೆಯಿಂದ ₹300 ಕೊಡಲು ಅವಕಾಶವಿದೆ. ಆದರೆ, ಅಷ್ಟು ಹಣಕ್ಕೆ ಸ್ಕ್ಯಾನಿಂಗ್ ಮಾಡಲು ಖಾಸಗಿಯವರು ಮುಂದಾಗುವುದಿಲ್ಲ. ಹಾಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬಂದವರಿಗೆ ಸ್ಕ್ಯಾನಿಂಗ್ ಅಗತ್ಯವಿದ್ದರೆ ತರೀಕೆರೆ ಕಡೆಯ ಸಾರ್ವಜನಿಕ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ತಾಲ್ಲೂಕಿನ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿಯಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ನೇಮಕಾತಿ ಕೋರಿ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರದ ಕುರಿತು ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಉಮೇಶ್ ತಿಳಿಸಿದರು.

ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಿದರೆ ಬಡ ಮಧ್ಯಮ ವರ್ಗದ ಜನತೆಗೆ ಹೊರೆ ಕಡಿಮೆಯಾಗುತ್ತದೆ ಎಂದು ಮಲ್ಲೇಶ್ವರದ ರಾಮಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.