ADVERTISEMENT

ಕಡೂರು | ಪತ್ನಿ ಕೊಂದು ಹೂತಿಟ್ಟ ಪ್ರಕರಣ: ಪತಿ, ಅತ್ತೆ, ಮಾವ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:25 IST
Last Updated 15 ಅಕ್ಟೋಬರ್ 2025, 4:25 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕಡೂರು: ತಾಲ್ಲೂಕಿನ ಕಸಬಾ ಹೋಬಳಿಯ ಆಲಘಟ್ಟ ಗ್ರಾಮದಲ್ಲಿ ಸುಮಾರು ಒಂದೂವರೆ ತಿಂಗಳ ಹಿಂದೆ ಪತ್ನಿಯನ್ನು ಕೊಂದು ಹೂತಿಟ್ಟ ಪ್ರಕರಣ ಸಂಬಂಧ ಗ್ರಾಮದ ನಿವಾಸಿ ಮೃತಳ ಪತಿ ವಿಜಯ್‌ಕುಮಾರ್‌, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪ ಅವರನ್ನು ಕಡೂರು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ADVERTISEMENT

ಆಲಘಟ್ಟದ ವಿಜಯಕುಮಾರ್‌ ತಾಲ್ಲೂಕಿನ ಚಿಕ್ಕಂಗಳ ಗ್ರಾಮದ ಸಮೀಪ ಪರದೇಶಿಹಾಳ್‌ನ ಭಾರತಿ ಎಂಬುವರನ್ನು ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರೋಪಿ ವಿಜಯ್‌ಕುಮಾರ್‌ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಪತ್ನಿ ಭಾರತಿಯ ಬಾಯಿಗೆ ಬಟ್ಟೆ ತುರುಕಿ ಹೊಡೆದು ಆಕೆಯು ಮೃತಪಟ್ಟ ಬಳಿಕ ಜಮೀನಿನಲ್ಲಿ ಕೊರೆಸಿ ವಿಫಲವಾಗಿದ್ದ ಕೊಳವೆಬಾವಿಯಲ್ಲಿ ಶವವನ್ನು ಹೂತಿಟ್ಟು ಕಡೂರು ಪೊಲೀಸ್‌ ಠಾಣೆಯಲ್ಲಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಪತ್ನಿಯ ಪೋಷಕರು ಕೇಳಿದರೆ ಸಂಬಂಧಿಕರಿಗೆ ಹುಷಾರಿಲ್ಲವೆಂದು ಶಿವಮೊಗ್ಗಕ್ಕೆ ಹೋಗಿದ್ದಾಳೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ. ಖಚಿತ ಸುಳಿವಿನ ಮೇರೆಗೆ ಈತನೇ ಹತ್ಯೆ ಮಾಡಿ ಶವ ಹೂತಿಟ್ಟು ಸುಳ್ಳು ದೂರು ದಾಖಲಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿಜಯಕುಮಾರ್‌ ಅನುಮಾನಾಸ್ಪದ ಹೇಳಿಕೆ ಹಾಗೂ ನಡವಳಿಕೆಯಿಂದ ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿ ಹತ್ಯೆ ಮಾಡಿರುವುದು ಹಾಗೂ ಅವನಿಗೆ ಸಹಕರಿಸಿದ ದೂರಿನ ಹಿನ್ನೆಲೆಯಲ್ಲಿ ಮೃತ ಭಾರತಿಯ ಪತಿ, ಅತ್ತೆ ಮತ್ತು ಮಾವನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.