(ಸಾಂದರ್ಭಿಕ ಚಿತ್ರ)
ಕಡೂರು(ಚಿಕ್ಕಮಗಳೂರು): ತೋಟದಲ್ಲಿ ಬಿದ್ದಿದ್ದ ಒಂದು ತೆಂಗಿನಕಾಯಿ ಎತ್ತಿಕೊಂಡಿದ್ದಕ್ಕೆ ತೋಟದ ಮಾಲೀಕರಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಎಸ್.ಬಿದರೆ ಗೊಲ್ಲರಹಟ್ಟಿಯ ವ್ಯಕ್ತಿ ಮೃತಪಟ್ಟಿದ್ದಾರೆ.
ಸೋಮವಾರ ಬೆಳಿಗ್ಗೆ ಗ್ರಾಮದ ಸಮೀಪದ ತೋಟಕ್ಕೆ ತೆರಳಿದ್ದ ಕುಮಾರ್(36) ಪಕ್ಕದ ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಎತ್ತಿಕೊಂಡಿದ್ದರು. ಅದನ್ನು ಗಮನಿಸಿದ ತೋಟದ ಮಾಲೀಕ ಚಂದ್ರಪ್ಪ ಹಾಗೂ ಅವರ ಅಳಿಯ ಮಧು ಇಬ್ಬರು ಸೇರಿಕೊಂಡು ಗುದ್ದಲಿ ಮತ್ತು ತೆಂಗಿನ ಗರಿಯ ಬಡ್ಡೆಯಿಂದ(ಎಡೆಮಟ್ಟೆ) ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
‘ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ಅವರನ್ನು ತೋಟದ ಪಕ್ಕದ ಹಳ್ಳದಲ್ಲಿ ಎಸೆದು ಹೋಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕುಮಾರ್ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಗಳಾದ ಚಂದ್ರಪ್ಪ ಮತ್ತು ಮಧು ಇಬ್ಬರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.