ADVERTISEMENT

ಕೊರತೆಗಳ ಮಧ್ಯೆ ಶೈಕ್ಷಣಿಕ ಸಾಧನೆ

ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸವಲತ್ತು– ಮನವಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:12 IST
Last Updated 28 ಅಕ್ಟೋಬರ್ 2025, 5:12 IST
 ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊರನೋಟ
 ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊರನೋಟ   

ಕಡೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಿಲ್ಲೆಯಲ್ಲೇ ಪ್ರಮುಖ ಕಾಲೇಜಾಗಿ ಹೊರಹೊಮ್ಮಿದೆ. ಇತಿಮಿತಿಗಳ ಮಧ್ಯೆಯೂ ತಾಲ್ಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ನೀಡುತ್ತಿದೆ.

1992-93ರಲ್ಲಿ ಅಸ್ತಿತ್ವಕ್ಕೆ ಬಂದ ಕಾಲೇಜಿನಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಬಿ.ಎ, ಬಿ.ಕಾಂ, ಬಿ.ಎಸ್‌ಸಿ ಬೋಧಿಸಲಾಗುತ್ತಿತ್ತು. ಮೂರೂವರೆ ದಶಕಗಳ ಸೇವೆಯಲ್ಲಿ ಈಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದೆ. ಸದ್ಯ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್‌ಸಿ, ಬಿಬಿಎ, ಬಿಸಿಎ ಪದವಿ ಜತೆಗೆ ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ, ಎಂ.ಕಾಂ ಮತ್ತು ಎಂಎಸ್‌ಸಿ ತರಗತಿಗಳೂ ನಡೆಯುತ್ತಿವೆ.

ಕಾಲೇಜಿನಲ್ಲಿ 1,831 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ, ಸ್ನಾತಕೋತ್ತರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿಗೆ 46 ಬೋಧಕರ ಸ್ಥಾನಗಳ ಪೈಕಿ 37 ಅಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 37 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

2025-26ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಪ್ರಯೋಗಾಲಯ, ಭಾಷಾ ಪ್ರಯೋಗಾಲಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸ್ಥಾಪನೆಯಾಗಿವೆ. ಈ ವೈಶಿಷ್ಟ್ಯಗಳಿಂದ ಮೂರನೇ ಸುತ್ತಿನ ನ್ಯಾಕ್‌ ಸಮಿತಿಯ ಪರಿಶೀಲನೆಯಲ್ಲಿ ಕಾಲೇಜು ಈ ವರ್ಷ ‘ಎ’ ಗ್ರೇಡ್‌ ಮಾನ್ಯತೆ ಪಡೆದಿದೆ.

ಆದರೆ, ಕಾಲೇಜಿನ ಬೇಡಿಕೆಗಳ ಪಟ್ಟಿಯೂ ದೊಡ್ಡದೇ ಇದೆ. ಮೂರೂವರೆ ದಶಕದ ಹಿಂದೆ ಕಾಲೇಜು ಆರಂಭವಾದಾಗ ಇದ್ದ ಶೌಚಾಲಯಗಳು ಈಗಿನ ವಿದ್ಯಾರ್ಥಿಗಳ ಸಂಖ್ಯೆಗೆ ಸಾಲುತ್ತಿಲ್ಲ. ಕಾಲೇಜು ಅಂಗಳದಲ್ಲಿ ನಿಲ್ಲುವ ಮಳೆ ನೀರು ಸೂಕ್ತವಾಗಿ ಹರಿದು ಹೊರಹೋಗಲು ವ್ಯವಸ್ಥೆ ಮಾಡಬೇಕಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗೆ ವಿಶಾಲವಾದ ಸಭಾಂಗಣ ಅಗತ್ಯವಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಚೇರಿ ಸಿಬ್ಬಂದಿ, ಹೆಚ್ಚುವರಿ ಬೋಧಕರ ನೇಮಕ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಆಗಬೇಕಿದೆ.

ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಅನುಕೂಲವಾಗಲು ಪ್ರತ್ಯೇಕ ಕ್ರೀಡಾಂಗಣದ ಅಗತ್ಯವಿದೆ. ಹೆದ್ದಾರಿ ಬದಿಯಲ್ಲಿರುವ ಕಾಲೇಜಿಗೆ ಪ್ರಶಾಂತ ವಾತಾವರಣ ರೂಪಿಸಲು ವಿಶೇಷ ಪ್ರಾಂಗಣದಲ್ಲೇ ಕಾಲೇಜನ್ನು ಸ್ಥಾಪಿಸಿದರೆ ಉತ್ತಮ ಎನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಇದೆ.

‘ಕಾಲೇಜು ತನ್ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ನಿರತವಾಗಿದೆ. ಸಮರ್ಥವಾಗಿ ಕಾಲೇಜು ನಡೆಯುತ್ತಿದೆ ಎನ್ನುವುದಕ್ಕೆ ನಾವು ನ್ಯಾಕ್‌ ವತಿಯಿಂದ ‘ಎ’ ಗ್ರೇಡ್‌ ಪಡೆದಿರುವುದೇ ನಿದರ್ಶನ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಬೇಕು ಎಂಬುದು ಸರಿ. ಆದರೆ, ಕಾಲೇಜು ವಿಶ್ವವಿದ್ಯಾಲಯದ ಅಧೀನದಲ್ಲಿ ಮತ್ತು ವ್ಯವಸ್ಥೆಯ ಭಾಗವಾಗಿ ಕರ್ತವ್ಯ ನಿರ್ವಹಿಸಬೇಕಿದ್ದು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಲಾಗುತ್ತದೆ’ ಎನ್ನುತ್ತಾರೆ ಪ್ರಾಂಶುಪಾಲ ಪ್ರೊ.ಕೆ.ರಾಜಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.