ಕಡೂರು: ಏಕಾಗ್ರತೆ ಮೂಲಕ ಎಂತಹ ಕಲೆಯನ್ನಾದರೂ ಕರಗತ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿ ಕಡೂರು ಹೊರವಲಯದ ಪ್ರಜ್ಞಾ ಸೆಂಟ್ರಲ್ ಸ್ಕೂಲ್‌ನ 6ನೇ ತರಗತಿ ವಿದ್ಯಾರ್ಥಿನಿ ಇಂಚರ ಎಂ.ಗಾಂಧಾರಿ ವಿದ್ಯೆ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.
ಕಡೂರಿನ ಮೋಹನ್ ಹಾಗೂ ವಿನುತಾ ದಂಪತಿಯ ಪುತ್ರಿ ಇಂಚರ, ದಸರಾ ರಜೆ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪಂಚತಂತ್ರ ಗುರುಕುಲಂ ಎನ್ನುವ ಸಂಸ್ಥೆ ಯೋಗವಿದ್ಯಾಶ್ರಮದಲ್ಲಿ ನಡೆದ ಶಿಬಿರದಲ್ಲಿ ತರಬೇತಿಯಲ್ಲಿ ಪಾಲ್ಗೊಂಡು ಅಲ್ಲಿ "ಗಾಂಧಾರಿ ವಿದ್ಯೆʼ ಕಲಿತು ಅದನ್ನು ಶಾಲೆಯಲ್ಲಿ ಪ್ರದರ್ಶಿಸಿದ್ದಾಳೆ.
ಗುರುವಾರ ಶಾಲೆಯ ಕಚೇರಿಯಲ್ಲಿ ಪತ್ರಕರ್ತರ ಮುಂದೆ ಈ ವಿದ್ಯೆಯನ್ನು ಬಾಲಕಿ ಪ್ರಸ್ತುತ ಪಡಿಸಿದಾಗ ಅಲ್ಲಿದ್ದವರೆಲ್ಲಾ ಮೂಕ ವಿಸ್ಮಿತರಾಗಿದ್ದರು. ಬಣ್ಣದ ಪೆನ್ಸಿಲ್‌ಗಳನ್ನು ಟೀಪಾಯಿ ಮೇಲೆ ಹರಡಿಕೊಂಡು ಪುಸ್ತಕವನ್ನು ಬಿಡಿಸಿಟ್ಟು ನಂತರ ಬಾಲಕಿ, ಹತ್ತಿ ಹಾಗೂ ಕರವಸ್ತ್ರದ ನೆರವಿನಿಂದ ಸ್ವತಃ ಕಣ್ಣು ಕಟ್ಟಿಕೊಂಡಳು. ತೆರೆದ ಪುಸ್ತಕದ ಮೇಲೆ ಸ್ಕ್ಯಾನ್ ಮಾಡುವಂತೆ ಕೈ ಆಡಿಸಿ ಪಕ್ಕದಲ್ಲಿದ್ದ ಬಣ್ಣದ ಪೆನ್ಸಿಲ್ ತೆಗೆದುಕೊಂಡು ವಾಸನೆ ನೋಡಿ ಪಕ್ಕದ ಚಿತ್ರದಲ್ಲಿ ಆ ಬಣ್ಣ ಎಲ್ಲಿ ತುಂಬಲಾಗಿತ್ತೋ ಹಾಗೆಯೇ ಮಾದರಿ ಚಿತ್ರಕ್ಕೆ ಚಾಚೂ ತಪ್ಪದೆ ಬಣ್ಣ ತುಂಬಿದಳು, ಸುಮಾರು 10 ನಿಮಿಷಗಳಲ್ಲಿ ಇಡೀ ಪುಟದಲ್ಲಿ ಎಲ್ಲೆಲ್ಲಿ ಯಾವ ಬಣ್ಣ ತುಂಬಬೇಕೋ ಹಾಗೆಯೇ ಬಿಡಿಸಿ ಚಿತ್ರವನ್ನು ವರ್ಣಮಯಗೊಳಿಸಿದಾಗ ಅಲ್ಲಿದ್ದವರೆಲ್ಲಾ ಕರತಾಡನ ಮಾಡಿ ಹರ್ಷ ವ್ಯಕ್ತಪಡಿಸಿದರು.
‘ತಾನು ಒಂದು ವಾರ ಕಾಲ ತರಬೇತಿ ಪಡೆದಿದ್ದು, 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿತು ತಮಗೆ ಇಷ್ಟವಾದ ಚಟುವಟಿಕೆ, ಆಟವನ್ನು ಪ್ರದರ್ಶಿಸಬಹುದು. ತನಗೆ ಚಿತ್ರಕಲೆ ಇಷ್ಟವಾದ ವಿಷಯವಾಗಿದ್ದರಿಂದ ನಾನು ಈ ವಿಷಯ ಆರಿಸಿಕೊಂಡಿದ್ದೆ. ಚಿತ್ರದ ಮೇಲ್ಭಾಗದಲ್ಲಿ ಕೈ ಆಡಿಸಿದಾಗ ಅದು ಸ್ಕ್ಯಾನ್ ರೀತಿ ವರ್ತಿಸುತ್ತದೆ. ಚಿತ್ರದ ಮೇಲೆ ಕೈ ಇಟ್ಟಾಗ ಎಲ್ಲಿ ಯಾವ ಬಣ್ಣ ತುಂಬಿಲ್ಲ ಎನ್ನುವುದು ಅರಿವಿಗೆ ಬರುತ್ತದೆ, ವಾಸನೆ ಮೂಲಕ ಗ್ರಹಿಸಿದರೆ ಇದು ಯಾವಬಣ್ಣ ಎಂದು ತಿಳಿಯುತ್ತದೆ. ಅದನ್ನು ಬಳಸಿ ವಿದ್ಯೆ ಪ್ರದರ್ಶಿಸಿದೆ. ಯೋಗ, ಮಂತ್ರಗಳ ಬೋಧನೆ ಮೂಲಕ ಈ ವಿದ್ಯೆಗೆ ಚಾಲನೆ ನೀಡಿ ಹಂತ ಹಂತವಾಗಿ ಕಲಿಸಿಕೊಟ್ಟಿದ್ದರುʼ ಎಂದು ವಿವರಿಸಿದಳು.
‘ಯೋಗದ ಮೂರನೇ ಪಥದಲ್ಲಿ ಇಂತಹ ವಿಷಯಗಳು ಲಭ್ಯವಿದೆ. ಬಾಲಕಿಯ ಈ ಪ್ರದರ್ಶನ ಶಾಲೆಗೂ ಗೌರವ ತಂದು ನಮಗೂ ಹೆಮ್ಮೆ ಮೂಡಿಸಿದೆ’ ಎಂದು ಶಾಲೆಯ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.