ಕಳಸ: ‘ತಾಲ್ಲೂಕು ಕೇಂದ್ರದ ಎಲ್ಲ ಕಚೇರಿಗಳು ಕಳಸ ಗ್ರಾ.ಪಂ. ವ್ಯಾಪ್ತಿಯಲ್ಲೇ ಬರುವುದರಿಂದ ಕಳಸ ಗ್ರಾ.ಪಂ. ಆಡಳಿತ ಯಾವುದೇ ತಕರಾರು ಮಾಡದೇ ಅಗತ್ಯ ಸಹಕಾರ ಕೊಡಬೇಕು’ ಎಂದು ಶಾಸಕಿ ನಯನಾ ಮೋಟಮ್ಮ ಮಂಗಳವಾರ ಮನವಿ ಮಾಡಿದರು.
ಕಳಸ ಗ್ರಾಮ ಪಂಚಾಯಿತಿಯ ನೂತನ ಮೀನು ಮಾರುಕಟ್ಟೆ ಕಟ್ಟಡ ಮತ್ತು ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಳಸ
ತಾಲ್ಲೂಕು ಕಚೇರಿ ಕಟ್ಟಡದ ನಿರ್ಮಾಣದ ಬಗೆಗಿನ ಕೆಲವರ ತಕರಾರು ಪ್ರಸ್ತಾಪಿಸಿದ ಅವರು, ಎಲ್ಲರೂ ಪಕ್ಷದ ಹಿತ ಮರೆತು ಜನರ ಕೆಲಸ ಮಾಡೋಣ’ ಎಂದರು.
ತಾಲ್ಲೂಕಿನ ಬಾಳೂರು-ಕಳಸ-ಕುದುರೆಮುಖ ರಸ್ತೆಗೆ ₹24 ಕೋಟಿ ಬಿಡುಗಡೆಯಾಗಿದ್ದು, ಮಳೆಗಾಲದ ನಂತರ ಕೆಲಸ ಆರಂಭವಾಗಲಿದೆ. ಕಳಸ ಪಂಚಾಯಿತಿ ಸದಸ್ಯರು ಒಗ್ಗೂಡಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ. ವಿಶೇಷ ಎಂದರೆ ಅವರು ಯಾವುದೇ ಶಾಸಕರ ಅಥವಾ ಸಂಸದರ ಬಳಿ ಅನುದಾನ ಕೇಳದೆ ಪಂಚಾಯಿತಿ ಆದಾಯದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ಕಳಸದ ಜನರು ಪಂಚಾಯಿತಿ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಅವರು ಶ್ಲಾಘಿಸಿದರು.
ವಿಧಾನಪರಿಷತ್ ಸದಸ್ಯ ಪ್ರಾಣೇಶ್ ಮಾತನಾಡಿ, ಕಳಸ ಗ್ರಾಮ ಪಂಚಾಯಿತಿ ತಾನೇ ಆದಾಯ ಕ್ರೋಢೀಕರಣ ಮಾಡುತ್ತಾ ಸಭಾಂಗಣ ಮತ್ತು ಹಲವು ಕಟ್ಟಡ ನಿರ್ಮಿಸಿದೆ. ಮೀನು ಮಾರುಕಟ್ಟೆಯ ಹೊಸ ಕಟ್ಟಡದ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಇಲ್ಲದಿದ್ದರೆ ಊರಿನ ವಾತಾವರಣ ಹಾಳಾಗಬಹುದು ಎಂದು ಕಿವಿಮಾತು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿಗಳ ಅಧಿಕಾರ ದೊಡ್ಡದು. ಇಲ್ಲಿನ ತೀರ್ಮಾನವನ್ನು ಸುಪ್ರೀಂಕೋರ್ಟ್ ಕೂಡ ಮಾನ್ಯ ಮಾಡುತ್ತದೆ. ಕಳಸ ಪಂಚಾಯಿತಿಯ ಅಭಿವೃದ್ಧಿ ಕೆಲಸ ಮಾದರಿ ಎಂದರು.
ಮುಖಂಡರಾದ ಕೆ.ಆರ್.ಪ್ರಭಾಕರ್, ಶೇಷಗಿರಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಕುಮಾರಿ, ಉಪಾಧ್ಯಕ್ಷ ಭಾಸ್ಕರ್, ಸದಸ್ಯರಾದ ಸಂತೋಷ್, ರಂಗನಾಥ್, ವೀರೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.