ಕಳಸ: ತಾಲ್ಲೂಕಿನೆಲ್ಲೆಡೆ ಸಾಮಾನ್ಯವಾಗಿ ಆಗಸ್ಟ್ ತಿಂಗಳ ಅಂತ್ಯಕ್ಕೆ ದಾಖಲಾಗುತ್ತಿದ್ದ ಒಟ್ಟು ಮಳೆ ಪ್ರಮಾಣ ಈ ಬಾರಿ ಜುಲೈ ಅಂತ್ಯಕ್ಕೆ ದಾಖಲಾಗಿದೆ. ಜುಲೈ ಅಂತ್ಯಕ್ಕೆ ಕಳಸ ಮಳೆಮಾಪನ ಕೇಂದ್ರದ ಪ್ರಕಾರ ಕಳಸದಲ್ಲಿ 106 ಇಂಚು (2650 ಮಿ.ಮೀ) ಮಳೆ ಸುರಿದಿದೆ.
ಮಾರ್ಚ್‌ನಲ್ಲಿ 26 ಮಿ.ಮೀ. ಮಳೆ ಮೂಲಕ ಬೇಸಿಗೆಯಲ್ಲೇ ಉತ್ತಮ ಮಳೆಯ ಸೂಚನೆ ಸಿಕ್ಕಿತ್ತು. ಕಾಫಿ ಬೆಳೆಗಾರರಿಗೆ ಸಕಾಲಿಕ ಹೂಮಳೆಯು ಭರವಸೆ ಮೂಡಿಸಿತ್ತು. ಏಪ್ರಿಲ್‌ನಲ್ಲಿ 219 ಮಿ.ಮೀ. ಮಳೆಯಾಗಿತ್ತು. ಇದು ಕಾಫಿ, ಅಡಿಕೆ ಫಸಲಿಗೆ ಉತ್ತಮ ಆಧಾರ ಒದಗಿಸಿತ್ತು.
ಮೇ ಮಧ್ಯಭಾಗದಲ್ಲಿ ಮಳೆಗಾಲ ಶುರು ಆದ ವಾತಾವರಣ ಇತ್ತು. ಕೊನೆಯ ಎರಡು ವಾರ ಮಳೆ ಸುರಿದು 707 ಮಿ.ಮೀ. ಮಳೆ ದಾಖಲಾಗಿತ್ತು. ಮೇ ತಿಂಗಳ ಮಳೆ ಪ್ರಮಾಣದಲ್ಲಿ ಇದು ದಾಖಲೆಯಾಗಿತ್ತು. ಬೇಸಿಗೆಯಲ್ಲಿ ಸುರಿದ ಮಳೆ ಕೃಷಿ ಕಾರ್ಯಕ್ಕೆ ಅಡ್ಡಿ ಮಾಡಿತ್ತು. ಕಾಫಿ ಗಿಡಗಳಲ್ಲಿ ಶಿಲೀಂಧ್ರದ ಬೆಳವಣಿಗೆ ಆರಂಭಗೊಂಡು ಫಸಲಿಗೆ ಅಪಾಯ ಶುರು ಆಗಿತ್ತು.
ಜೂನ್‌ನಲ್ಲಿ ಸತತ ಸುರಿದ ಮಳೆ 831 ಮಿ.ಮೀ. ದಾಖಲಿಸಿತು. ಜುಲೈ ತಿಂಗಳಲ್ಲೂ ಎಡೆಬಿಡದೆ ಸುರಿದ ಮಳೆ 880 ಮಿ.ಮೀ. ದಾಖಲಿಸಿತು. ಅಡಿಕೆ, ಕಾಫಿ, ಮೆಣಸಿಗೆ ಔಷಧಿ ಸಿಂಪಡಣೆಗೂ ಬಿಡುವು ನೀಡದೆ ಧಾರಾಕಾರ ಮಳೆ ಸುರಿಯಿತು. ಪರಿಣಾಮವಾಗಿ ಕಾಫಿಗೆ ಕಪ್ಪುಕೊಳೆ ರೋಗ ಬಾಧಿಸಿತು. ಹೆಚ್ಚಾದ ತೇವಾಂಶದಿಂದ ಹಸಿರು ಕಾಯಿಗಳೂ ಉದುರಿ ಶೇ 30ಕ್ಕೂ ಅಧಿಕ ಫಸಲು ಹಾನಿ ಆಯಿತು. ಕಾಡಂಚಿನ ಬಲಿಗೆ, ಕಳಕೋಡು ಪ್ರದೇಶದಲ್ಲಿ 150 ಇಂಚು (3750 ಮಿ.ಮೀ.) ಮಳೆ ಸುರಿದಿದ್ದು ನೆಲ್ಲಿಬೀಡು ಪ್ರದೇಶದಲ್ಲಿ 4500 ಮಿ.ಮೀ. ಮಳೆ ಆಗಿದೆ. ಅಲ್ಲಿನ ತೋಟಗಳಲ್ಲಿ 3ನೇ ಬಾರಿ ಅಡಿಕೆಗೆ ಔಷಧಿ ಸಿಂಪಡಿಸುವ ಅನಿವಾರ್ಯತೆ ಎದುರಾಗಿದೆ. ಇದೀಗ ಬಿಸಿಲು ಕಾಯುತ್ತಿದ್ದು, ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯಬಹುದು ಎಂಬ ಅಂದಾಜು ಕೃಷಿಕರನ್ನು ಕಂಗಾಲು ಮಾಡಿದೆ. ‘ಈಗಾಗಲೇ ಬಹುಪಾಲು ಕಾಫಿ ಫಸಲು ಕಳೆದುಕೊಂಡಿದ್ದೇವೆ. ಮುಂದಿನ ಮೂರು ತಿಂಗಳು ಮಳೆ ಹೆಚ್ಚಾದರೆ ಕಾಳುಮೆಣಸು, ಅಡಿಕೆ ಕೈಗೆ ಸಿಗುವುದು ಕಷ್ಟ’ ಎಂದು ಬೆಳೆಗಾರ ಜೇನುಗೂಡು ಸುರೇಶ್ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.