
ಕಳಸ: ತಾಲ್ಲೂಕಿನಾದ್ಯಂತ ಭತ್ತದ ಪೈರು ನಳನಳಿಸುತ್ತಿದ್ದು, ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ. ಅಕ್ಟೋಬರ್ ತಿಂಗಳಲ್ಲಿ ಕಳಸದಲ್ಲಿ ದಾಖಲೆಯ 350 ಮಿ.ಮೀ ಮಳೆ ಸುರಿದಿತ್ತು. ಈ ಮಳೆಯು ಭತ್ತದ ಗದ್ದೆಗೆ ಬೇಕಿದ್ದ ನೀರನ್ನು ಸಕಾಲದಲ್ಲಿ ಒದಗಿಸಿ, ಉತ್ತಮ ಫಸಲು ಬರಲು ಕಾರಣವಾಗಿದೆ.
ಕಳಸ ಆಸುಪಾಸಿನಲ್ಲಿ ಐಇಟಿ ಮಾದರಿಯ ಭತ್ತವನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಈ ಭತ್ತವು ಊಟಕ್ಕೆ ಬೇಕಾದ ರುಚಿಯಾದ ಸಣ್ಣಅಕ್ಕಿ ಪೂರೈಸುತ್ತಿದೆ. ಈ ತಳಿಯ ಭತ್ತದ ಪೈರು ಹೊಡೆ ಒಡೆಯುತ್ತಿದ್ದು ತೆನೆ ಮೂಡುವ ಹಂತದಲ್ಲಿದೆ.
ಹೊರನಾಡು, ಸಮೀಪದ ಬಲಿಗೆ ಹಾಗೂ ಕಾರಗದ್ದೆ ಸಮೀಪದ ಹೇರಡಿಕೆ ಪ್ರದೇಶದಲ್ಲಿ ಸಾಂಪ್ರದಾಯಿಕ ಹೆಗ್ಗೆ ತಳಿಯ ಭತ್ತ ಬೆಳೆಯಲಾಗುತ್ತಿದೆ. ಹೆಗ್ಗೆ ಭತ್ತವು ಎತ್ತರಕ್ಕೆ ಬೆಳೆದಿದ್ದು, ಭರ್ಜರಿ ಇಳುವರಿಯ ನಿರೀಕ್ಷೆ ಮೂಡಿಸಿದೆ ಎಂದು ಅಲ್ಲಿನ ರೈತರು ಖುಷಿ ಪಡುತ್ತಿದ್ದಾರೆ.
ಹೆಗ್ಗೆ ಭತ್ತಕ್ಕೆ ಯಾವುದೇ ಗೊಬ್ಬರ, ಔಷಧಿ ಬೇಡ. ಮಳೆಗಾಲದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಈ ಅಕ್ಕಿ ವರ್ಷವಿಡೀ ನಮ್ಮ ಹೊಟ್ಟೆ ತುಂಬಿಸುತ್ತದೆ ಎಂದು ಹೇರಡಿಕೆಯ ಯುವ ಕೃಷಿಕ ಗಣೇಶ್ ಅಭಿಮಾನದಿಂದ ಹೇಳುತ್ತಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಬಹುತೇಕ ಭತ್ತದ ಗದ್ದೆಗಳು ಅಡಿಕೆ, ಕಾಫಿ ತೋಟಗಳಾಗಿ ಪರಿವರ್ತನೆ ಆಗಿದೆ. ಈಗ ಉಳಿದಿರುವ 3 ಸಾವಿರ ಎಕರೆ ಭತ್ತದ ಗದ್ದೆ ಮಾತ್ರ ಸಾಗುವಳಿ ಆಗುತ್ತಿದೆ. ಹಾಗಾಗಿ ಕಳಸ ಆಸುಪಾಸಿನಲ್ಲಿ ಭತ್ತದ ಕೃಷಿ ವಾಣಿಜ್ಯ ಉದ್ದೇಶ ಇಲ್ಲದೆ ಊಟಕ್ಕೆ ಸ್ಥಳೀಯ ಅಕ್ಕಿ ಪಡೆಯುವ ಉದ್ದೇಶದಿಂದಲೇ ನಡೆಯುತ್ತಿದೆ.
ನಮಗೆ ಗದ್ದೆ ಕೃಷಿ ಎಂದರೆ ಸಂಭ್ರಮ, ಅದು ನಮ್ಮ ಸಂಸ್ಕೃತಿ. ಆದರೆ ಕಾಡುಕೋಣ, ನವಿಲು, ಕಾಡುಹಂದಿ ಕಾಟದಿಂದ ಗದ್ದೆ ಉಳಿಸಿಕೊಳ್ಳುವುದೇ ಸವಾಲು ಎನ್ನುತ್ತಾರೆ ಕೃಷಿಕ ಯಡೂರಿನ ಕಿರಣ್ ಶೆಟ್ಟಿ.
ಭತ್ತದ ಕೃಷಿ ನಶಿಸುತ್ತಿದ್ದು, ಕಳಸ ಪಟ್ಟಣದಲ್ಲಿ ಸ್ಥಳೀಯ ಅಕ್ಕಿ ಖರೀದಿಗೆ ಸಿಗುತ್ತಿಲ್ಲ. ಇದರಿಂದ ಪರಊರುಗಳಿಂದ ಅಕ್ಕಿ ತಂದು ಮಾರಾಟ ಮಾಡಲಾಗುತ್ತಿದೆ. ಇನ್ನೊಂದೆಡೆ ಇಲ್ಲಿನ ಕೆಂಪು ಅಕ್ಕಿಯನ್ನು ಕೆ.ಜಿಗೆ ₹100ಕ್ಕೆ ಅಲ್ಲಲ್ಲಿ ಮಾರಾಟ ಮಾಡಲಾಗುತ್ತಿದೆ.
ಭತ್ತದ ಕೃಷಿ ಉತ್ತೇಜಿಸುವ ಯೋಜನೆಗಳು ಜಾರಿಗೆ ಬರಬೇಕು. ಭತ್ತದ ಗದ್ದೆ ನೀರು ಇಂಗಿಸುವ ಮತ್ತು ಅಂತರ್ಜಲ ವೃದ್ಧಿಸುವ ತಾಣ ಎಂಬುದನ್ನು ನಾವು ಮರೆಯಬಾರದುಶ್ರೀಮಂದರ ಬಲಿಗೆಯ, ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.