ಕಡೂರು: ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು ಜಗತ್ತಿನ ಹೆಮ್ಮೆಯ ಭಾಷೆಗಳಲ್ಲಿ ಒಂದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಕಡೂರು ತಾಲ್ಲೂಕು ಕಸಬಾ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕವನ್ನು ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
ವಿಶ್ವದಲ್ಲಿರುವ ಇತರೆ ಭಾಷೆಗಳನ್ನು ಗಮನಿಸಿದಾಗ ಅತ್ಯಂತ ಸುಂದರ ಹಾಗೂ ಸುಲಲಿತವಾದ ಭಾಷೆ ನಮ್ಮ ಕನ್ನಡ, ತನ್ನ ಲಾಲಿತ್ಯ ಮತ್ತು ಸೌಂದರ್ಯದಿಂದ ಇದು ಇತರೆ ಎಲ್ಲ ಭಾಷೆಗಳಿಗೂ ರಾಜನಿದ್ದಂತೆ ಎಂದು ನುಡಿದರು.
ಭುವನೇಶ್ವರಿ ಭಾವಚಿತ್ರ ಅನಾವರಣಗೊಳಿಸಿದ ಜಿಲ್ಲಾ ಕೋಶಾಧ್ಯಕ್ಷ ಬಿ. ಪ್ರಕಾಶ್, ರಾಜ್ಯದಲ್ಲಿಯೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನೂತನವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಚಟುವಟಿಕೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದೆ. ಕಡೂರು ತಾಲೂಕಿನಲ್ಲಿ ಗ್ರಾಮ ಸಾಹಿತ್ಯ ಸಮ್ಮೇಳನ, ಹೋಬಳಿ ಸಾಹಿತ್ಯ ಸಮ್ಮೇಳನ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಈಗಾಗಲೇ ತಯಾರಿ ನಡೆದಿದೆ ಎಂದು ತಿಳಿಸಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಮಾತನಾಡಿ, ಭುವನೇಶ್ವರಿ ಪುತ್ಥಳಿಯನ್ನು ಕಡೂರು ಪಟ್ಟಣದಲ್ಲಿ ಶಾಸಕರು ಮತ್ತು ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದೊಂದಿಗೆ ನಿರ್ಮಿಸಲು ಸಾಧ್ಯವಾಗಿದೆ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ನಿಮ್ಮೆಲ್ಲರ ಸಹಕಾರದೊಂದಿಗೆ ನೆರವೇರಿಸಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.
ಹೋಬಳಿ ಘಟಕದ ಆಧ್ಯಕ್ಷರಾಗಿ ಆಯ್ಕೆಯಾದ ಆರ್.ಹನುಮಂತಪ್ಪ ಸಾಹಿತ್ಯ ಚಟುವಟಿಕೆಯ ಸಿರಿ ಪ್ರಸಾರಕ್ಕೆ ಗ್ರಾಮೀಣ ಪ್ರದೇಶದಲ್ಲಿ ಶ್ರಮಿಸುತ್ತೇನೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುರುಬಗೆರೆ ತಿಮ್ಮಯ್ಯ, ಶ್ರೀ ಕಟ್ಟೆ ಹೊಳೆಯಮ್ಮ ಜಾತ್ರಾ ಸಮಿತಿಯ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ, ಪಟ್ಟಣಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶಾಲಿನಿ ದಿನೇಶ್, ಜಿಗಣೆಹಳ್ಳಿ ನೀಲಕಂಠಪ್ಪ ಕುರುಬಗೆರೆ ಕೆ.ಆರ್. ವೆಂಕಟೇಶ್, ಮಲ್ಲೇಶಪ್ಪ, ಪಿ. ಟಿ. ಹರೀಶ್, ಸಿಂಗಟಗೆರೆ ಸಿದ್ದಪ್ಪ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.