ADVERTISEMENT

ಅನ್ಯ ಭಾಷೆ ಗೇಲಿ ಮಾಡುವುದೂ ಅಸಹನೆ: ಚಿಂತಕ ರಹಮತ್ ತರೀಕೆರೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:11 IST
Last Updated 31 ಆಗಸ್ಟ್ 2025, 5:11 IST
ರಂಗೇನಹಳ್ಳಿ ಗ್ರಾಮದ ಶ್ರೀ ಅಂಬಾಭವಾನಿ ಸಮುದಾಯ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಾರ್ಯಾಗಾರದ ಎರಡನೇ ದಿನದ ಸಂವಾದ ಕಾರ್ಯಕ್ರಮಕ್ಕೆ ನಾಡಿನ ಶ್ರೇಷ್ಠ ಬರಹಗಾರರಾದ ಅಗ್ರಹಾರ ಕೃಷ್ಣಮೂರ್ತಿ, ರಾಜಪ್ಪ ದಳವಾಯಿ, ರಹಮತ್ ತರೀಕೆರೆ, ಸಬೀತ ಬನ್ನಾಡಿ, ರವಿ ಕುಮಾರ್ ನೀಹಾ ಮತ್ತೀತರರು ಭಾಗವಹಿಸಿದ್ದರು.
ರಂಗೇನಹಳ್ಳಿ ಗ್ರಾಮದ ಶ್ರೀ ಅಂಬಾಭವಾನಿ ಸಮುದಾಯ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕಾರ್ಯಾಗಾರದ ಎರಡನೇ ದಿನದ ಸಂವಾದ ಕಾರ್ಯಕ್ರಮಕ್ಕೆ ನಾಡಿನ ಶ್ರೇಷ್ಠ ಬರಹಗಾರರಾದ ಅಗ್ರಹಾರ ಕೃಷ್ಣಮೂರ್ತಿ, ರಾಜಪ್ಪ ದಳವಾಯಿ, ರಹಮತ್ ತರೀಕೆರೆ, ಸಬೀತ ಬನ್ನಾಡಿ, ರವಿ ಕುಮಾರ್ ನೀಹಾ ಮತ್ತೀತರರು ಭಾಗವಹಿಸಿದ್ದರು.   

ತರೀಕೆರೆ: ಕನ್ನಡದ ಪ್ರತಿ ಶಬ್ದವನ್ನು ಉಳಿಸಿಕೊಂಡರೆ, ಬಹುತ್ವವನ್ನು ಉಳಿಸಿಕೊಳ್ಳುವುದಾಗಿದೆ. ಭಾಷೆ ನಮ್ಮದಲ್ಲ ಅನ್ನುವ ಕಾರಣಕ್ಕೆ ಅನ್ಯ ಭಾಷೆಯನ್ನು ಗೇಲಿ ಮಾಡುವುದು ಅಸಹನೆ ತೋರಿಸುತ್ತದೆ. ಕನ್ನಡದ ಒಳನುಡಿಗಳನ್ನು ಉಳಿಸಿ ಸಂಭ್ರಮಿಸೋಣ ಎಂದು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸದ್ಗುರು ಜನಸೇವಾ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾಲ್ಲೂಕಿನ ರಂಗೇನಹಳ್ಳಿಯ ಶ್ರೀಅಂಬಾಭವಾನಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಧ್ಯಮಗಳು ಹಾಗೂ ಆಕಾಶವಾಣಿ ಕನ್ನಡಕ್ಕೆ ಅನ್ಯಾಯ ಮಾಡಿವೆ. ಮೇಲು ಎಂಬುದು ಆಡಳಿತಕ್ಕೆ ಇರಬೇಕೆ ಹೊರತು ಸಾಹಿತ್ಯಕ್ಕೆ ಇರಬಾರದು. ದೇವನೂರು ಮಹಾದೇವ ಅವರು ತಮ್ಮ ಕೃತಿ ‘ಕುಸುಮಬಾಲೆ’ಯ ಮೂಲಕ ನಂಜನಗೂಡಿನ ನೆಲದ ಭಾಷೆಯನ್ನು ಪರಿಚಯಿಸಿದರು. ಪ್ರತಿ ಹತ್ತು ಕಿಲೋ ಮೀಟರ್‌ಗೆ ಭಾಷೆ ಬದಲಾಗುತ್ತದೆ. ಈ ಭಿನ್ನತೆಯನ್ನು ನಾವು ಗೌರವಿಸಬೇಕು. ಕನ್ನಡದ ನಿಘಂಟುಗಳು ಒಳಗನ್ನಡವನ್ನು ಸೇರಿಸಿಕೊಳ್ಳಲಿಲ್ಲ’ ಎಂದು ಹೇಳಿದರು

ADVERTISEMENT

ದಲಿತ ಅಭಿವ್ಯಕ್ತಿ ಮತ್ತು ಹೋರಾಟದಲ್ಲಿ ಕನ್ನಡ ಕುರಿತು ಮಾತನಾಡಿದ ಕತೆಗಾರ ತುಂಬಾಡಿ ರಾಮಯ್ಯ, ಹೋರಾಟಗಾರ ಪ್ರೊ.ಬಿ.ಕೃಷ್ಣಪ್ಪ ಚಳವಳಿಗಾರರು. ಬರಹಗಾರರಲ್ಲ. ಹಾಗೆಯೇ ದೇವನೂರು ಮಹಾದೇವ ಹೆಸರಾಂತ ಬರಹಗಾರರು. ಚಳವಳಿಗಾರರಲ್ಲ. ಬೀದಿಗಿಳಿದು ಹೋರಾಟ ಮಾಡುವ ಆಯಾಮಗಳು ಇಂದು ವಿಭಿನ್ನವಾಗಿವೆ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ಅಂದು ಗೋಡೆ ಮೇಲೆ ಬರೆದ ಹೋರಾಟದ ಸಾಲುಗಳು, ನಂತರ ಸರ್ಕಾರದ ಕಾನೂನುಗಳು ಆಗಿವೆ. ಹೋರಾಟಗಳು ಸಮಸ್ಯೆಗಳ ಮಧ್ಯೆ ಹುಟ್ಟಿಕೊಳ್ಳುತ್ತವೆ. 33 ವರ್ಷದ ಮೀಸಲಾತಿ ಹೋರಾಟ ಇಂದು ವೈಜ್ಞಾನಿಕವಾಗಿ ವಿಂಗಡಿಸಿ ಮೀಸಲಾತಿ ನಿಗದಿ ಪಡಿಸಿ ಎಂದು ಕೇಳುವಲ್ಲಿ ಶಿಕ್ಷಣ ಹಾಗೂ ಪ್ರಜ್ಞೆ ದೊಡ್ಡದು. ಈಗ ದೇವನೂರು ಮಹಾದೇವ ಅಂತಹವರು ಪತ್ರ ಬರೆದರೆ ಸಾಕು. ಹೋರಾಟದ ರೂಪ ಪಡೆಯುತ್ತದೆ. ಪ್ಯೂಡಲ್ ಸೊಸೈಟಿ ಇಂದಿಗೂ ಕೆಳ ವರ್ಗದವರನ್ನು ತಮ್ಮ ಮನೆಯ ಆಳಾಗಿರಬೇಕು ಎಂದು ಬಯಸುತ್ತದೆ. ಕುದ್ಮಲ್ ರಂಗರಾವ್ ಅವರ ತಿಳಿವಳಿಕೆ ಗಾಂಧಿಗೆ ಮಾರ್ಗದರ್ಶನ ಮಾಡಿತ್ತು. ಗಾಂಧಿ ಕುದ್ಮಲ್ ರಂಗರಾವ್ ಅವರನ್ನು ಗುರುವಾಗಿ ಸ್ವೀಕರಿಸಿದ್ದರು’ ಎಂದು ಹೇಳಿದರು.

ಶಿಕ್ಷಣದಲ್ಲಿ ವೈಜ್ಞಾನಿಕ ಮನೋಧರ್ಮ-ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ವೈಚಾರಿಕ ಪ್ರಚಾರಕ ಎಚ್.ಆರ್.ಸ್ವಾಮಿ ಮಾತನಾಡಿ, ಮೌಢ್ಯಗಳು ದಿನನಿತ್ಯ ನಮ್ಮನ್ನು ಸುತ್ತುತ್ತವೆ. ಪರಂಪಾರಗತ ನಂಬಿಕೆಗಳಿಂದ ಮೌಢ್ಯ ಉಳಿಯುತ್ತದೆ. ದೇವರ ಅಪ್ಪಣೆ ಪಡೆಯುವುದು ಭಾರತ ದೇಶದಲ್ಲಿ ಮಾತ್ರ ಆಗಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆಡಳಿತದಲ್ಲಿ ವೈಜ್ಞಾನಿಕ ಪರ ಚಿಂತನೆ ಹುಟ್ಟು ಹಾಕಿದರು ಎಂದು ಹೇಳಿದರು.

ಸಂವಾದದಲ್ಲಿ ಸಾಹಿತಿ ಟಿ.ದಾದಾಪೀರ್, ಲಕ್ಕವಳ್ಳಿ ಚಕ್ರವರ್ತಿ, ನವೀನ್ ಪೆನ್ನಯ್ಯ, ಅನಂತ ನಾಡಿಗ್ ಹಾಗೂ ಇತರರು ಭಾಗವಹಿಸಿದ್ದರು.

ಹಿಂದಿ ಕಲಿಕೆಗೆ ವಿರೋಧ ಬೇಡ. ಆದರೆ ಹಿಂದಿ ಕಡ್ಡಾಯಕ್ಕೆ ವಿರೋಧವಿರಲಿ. ಕಳೆದ ಸಾಲಿನಲ್ಲಿ 95 ಸಾವಿರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಫೇಲಾಗಿದ್ದಾರೆ. ಭಾಷಾ ನೀತಿಯಿಂದ ವಿದ್ಯಾರ್ಥಿಗಳನ್ನು ಕೊಲ್ಲಬಾರದು
ರಹಮತ್ ತರೀಕೆರೆ, ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.