ತರೀಕೆರೆ: ‘ಮಗುವಿಗೆ ಬಾಲ್ಯದಿಂದಲೇ ತಾಯಿ ಭಾಷೆ ಕನ್ನಡವನ್ನು ಕಲಿಸಿ, ಅದನ್ನು ಪ್ರೀತಿಸುವ ಗುಣ ಬೆಳೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರವಿ ದಳವಾಯಿ ಹೇಳಿದರು.
ಕಸಾಪ ತಾಲ್ಲೂಕು ಘಟಕ ಮತ್ತು ಅಮೃತಾಪುರ ಹೋಬಳಿ ಘಟಕದಿಂದ ಕುಂಟಿನಮಡು ಗ್ರಾಮದ ಡಿ. ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಡೆದ ‘ಶ್ರಾವಣ ಸಾಹಿತ್ಯ ಸಂಭ್ರಮ ಮತ್ತು ಅಮೃತಾಪುರ ಹೋಬಳಿ ಘಟಕ ಸೇವಾದೀಕ್ಷಾ ಸಮಾರಂಭ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಎರಡೂವರೆ ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಅದನ್ನು ಯಾವತ್ತೂ ಅಳಿಸಲಾಗದು. ಆಧುಕಿನ ತಂತ್ರಜ್ಞಾನ ಬಳಸಿಕೊಂಡು ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಮಾಹಿತಿ ತಲುಪಿಸುವ ಮೂಲಕ ಕನ್ನಡ ಭಾಷೆ ಉಳಿಸಿ–ಬೆಳೆಸಬೇಕು ಎಂದರು.
ಶಿಕ್ಷಕ ಮುದಿಗೆರೆ ಲೋಹಿತ್ ಕುಮಾರ್ ಅವರು ‘ಸಮಾನತೆ ಸಾಕಾರಗೊಳಿಸುವಲ್ಲಿ ಅನುಭವ ಮಂಟಪ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ಸಮಾನರು ಎಂದು ಹೇಳಿ, ಸಮಾನತೆ ಪರವಾಗಿ ಅನೇಕ ವಚನಕಾರರನ್ನು ಒಗ್ಗೂಡಿಸಿ ಸಮಸಮಾಜ ಕಟ್ಟುವ ಕೆಲಸ ಮಾಡಿದರು. ಕಾಯಕದಿಂದ ಪ್ರತಿಯೊಬ್ಬ ಮನುಷ್ಯನ ಜೀವನ ಸಾರ್ಥಕವಾಗಬೇಕು. ಸಹೋದರಿ ಅಕ್ಕನಾಗಲಾಂಬಿಕೆ ಗದ್ದುಗೆ ತರೀಕೆರೆಯಲ್ಲಿ ಇರುವುದು ನಮ್ಮ ಪುಣ್ಯ’ ಎಂದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ಆರ್. ಆನಂದಪ್ಪ ಮಾತನಾಡಿ, ‘ಕನ್ನಡ ಕಲಿತು, ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.
ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟಿ ಶ್ರೀನಿವಾಸ್ ಅವರು, ಕನ್ನಡ ನಾಡು-ನುಡಿ, ಜಲ, ಬಾಷೆ, ಸಾಹಿತ್ಯ ರಕ್ಷಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ ಅವರು, ಕಸಾಪ ಅಮೃತಾಪುರ ಹೋಬಳಿ ಘಟಕದ ಅಧ್ಯಕ್ಷ ಶಂಕರಪ್ಪ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿ ಶುಭಾಷಯ ಕೋರಿದರು.
ಎಚ್. ಶಂಕರಪ್ಪ ನಂದಿ ಧ್ವಜ ಸ್ವೀಕರಿಸಿ ಮಾತನಾಡಿ, ‘ಕನ್ನಡ ಕಟ್ಟುವ ಕೆಲಸ ನಮ್ಮೆಲ್ಲರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಗ್ರಾಮಮಟ್ಟದಲ್ಲಿ ಸ್ಥಳೀಯರೊಡಗೂಡಿ ಸಮ್ಮೇಳನ ಮಾಡುವ’ ಆಶಯ ವ್ಯಕ್ತಪಡಿಸಿದರು.
ಅಮೃತಾಪುರ ಎ.ಎಸ್. ಈಶ್ವರಪ್ಪ ಮಾತನಾಡಿ, ‘ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.
ಗ್ರಾ.ಪಂ. ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ಮೀನಾಕ್ಷಮ್ಮ, ಜಗದೀಶ್, ಸಂತೋಷ್ ಕುಮಾರ್, ಮನಸುಳಿ ಮೋಹನ್, ಚೇತನಗೌಡ, ಡಿ. ಸುರೇಶ್, ಕೆ.ಸಿ. ಓಂಕಾರಪ್ಪ, ಕಲ್ಲೇಶ್, ಧರಣೇಶ್, ಎಸ್.ಟಿ. ತಿಪ್ಪೇಶಪ್ಪ, ನಿಲಯ ಮೇಲ್ವಿಚಾರಕ ಟಿ.ಸಿ. ದೇವರಾಜ್ ಭಾಗವಹಿಸಿದ್ದರು.
‘ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ’ ‘ಕನ್ನಡ ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ‘ಕಾಯಕದಿಂದ ಪ್ರತಿಯೊಬ್ಬ ಮನುಷ್ಯನ ಜೀವನ ಸಾರ್ಥಕವಾಗಲಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.