ADVERTISEMENT

ಹಕ್ಕು ಪಡೆಯಲು ಕಾನೂನು ಅರಿವು ಅಗತ್ಯ

ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಕಾನೂನು ಅರಿವು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:22 IST
Last Updated 12 ಡಿಸೆಂಬರ್ 2025, 3:22 IST
ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೌರ ಕಾರ್ಮಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ವಿ.ಹನುಮಂತಪ್ಪ ಉದ್ಘಾಟಿಸಿದರು
ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೌರ ಕಾರ್ಮಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ವಿ.ಹನುಮಂತಪ್ಪ ಉದ್ಘಾಟಿಸಿದರು   

ಚಿಕ್ಕಮಗಳೂರು: ಸಂವಿಧಾನದ ಆಶಯದಂತೆ ಸರ್ವರಿಗೂ ಸಮಾನತೆ, ಸಮಬಾಳು, ವ್ಯಕ್ತಿ ಗೌರವ, ಸಮಪಾಲು ದೊರಕಬೇಕು. ಎಲ್ಲರನ್ನು ಗೌರವದಿಂದ ಕಾಣುವ ಸಮ ಸಮಾಜ ನಿರ್ಮಾಣವಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

ನಗರಸಭೆ ಕಚೇರಿಯಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಭಾರತದ ಪ್ರಜೆಗಳಾದ ನಾವು ಎಲ್ಲರೂ ಒಂದು ಎಂಬ ಮನೋಭಾವ ಮೂಡಬೇಕು. ವಿವಿಧತೆಯಲ್ಲಿ ಏಕತೆ, ಭಾಷೆ, ಭಿನ್ನವಾದ ಸಂಸ್ಕೃತಿ ಇವೆಲ್ಲವನ್ನು ಮೀರಿ ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ, ಆರ್ಥಿಕ ನ್ಯಾಯ ಎಂಬ ಮೂರು ನ್ಯಾಯಗಳನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ನಗರವನ್ನು ಸ್ವಚ್ಛ ಮಾಡುವ ಕಾಯಕವನ್ನು ಕೆಲವೇ ಸಮುದಾಯದ ಜನ ಮಾಡುತ್ತಿದ್ದಾರೆ. ಇಂತಹ ಕೆಲಸಕ್ಕೆ ನಗರಸಭೆಯಿಂದ ಅರ್ಜಿ ಆಹ್ವಾನಿಸಿದರೆ ಯಾರೂ ಅರ್ಜಿ ಸಲ್ಲಿಸುವುದಿಲ್ಲ. ಪೌರ ನೌಕರರು ತಾಯಿ ಸ್ಥಾನದಲ್ಲಿ ನಿಂತು ಸಮಾಜವನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪೌರ ಕಾರ್ಮಿಕರನ್ನು ನಿಂದನೆ ಮಾಡದೆ ಗೌರವದಿಂದ ಕಾಣುವುದು ಎಲ್ಲರ ಕರ್ತವ್ಯ ಎಂದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.

ಮಹಿಳೆ ಸೇರಿ ಸಮಾಜದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು. ಇದನ್ನು ಎಲ್ಲರೂ ಅಳವಡಿಸಿಕೊಂಡಾಗ ಸಮಾಜದಲ್ಲಿ ಮೌಢ್ಯತೆ ದೂರವಾಗುತ್ತದೆ ಎಂದು ಹೇಳಿದರು.

ವಕೀಲರಾದ ಶಶಿ, ನಗರಸಭೆ ಕಚೇರಿ ವ್ಯವಸ್ಥಾಪಕ ರವಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಪರಿಸರ) ವೆಂಕಟೇಶ್, ಆರೋಗ್ಯ ನಿರೀಕ್ಷಕ ರಂಗಪ್ಪ, ಈಶ್ವರ್, ವೆಂಕಟೇಶ್, ಅಣ್ಣಯ್ಯ, ಶ್ರೀನಿವಾಸ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.