ADVERTISEMENT

ಮಳೆ ಹಾನಿ ಪರಿಹಾರ ನೀಡಿ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:27 IST
Last Updated 9 ಜುಲೈ 2022, 6:27 IST
ಮೋಟಮ್ಮ
ಮೋಟಮ್ಮ   

ಮೂಡಿಗೆರೆ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಅನೇಕ ಕಡೆಯಲ್ಲಿ ಹಾನಿ ಸಂಭವಿಸುತ್ತಿದ್ದು, ಹಾನಿಯ ಬಗ್ಗೆ ಅಧಿಕಾರಿಗಳು, ಸ್ಥಳೀಯ ಶಾಸಕರು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ದೂರಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕುಸಿಯುತ್ತಿದೆ. ಕಳಸ ಭಾಗದಲ್ಲಿ ಹೆಮ್ಮಕ್ಕಿ, ಬಾಳೆಹೊಳೆ, ಗಬ್ಗಲ್, ಹಡ್ಲುಗದ್ದೆ ಸೇರಿದಂತೆ ಹಲವು ರಸ್ತೆಗಳು ನೀರಿನಿಂದ ಕೊಚ್ಚಿ ಹೋಗಿವೆ. ಶಾಲೆ ಮಕ್ಕಳಿಗೆ ಮಳೆಯಿಂದಾಗುವ ಅನಾಹುತ ತಪ್ಪಿಸಲು ಹಾಗೂ ಹಾನಿಗೊಳಗಾದ ಕುಟುಂಬಕ್ಕೆ ಪರಿಹಾರ ಒದಗಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಕೂಡಲೇ ಒಂದು ತಂಡ ರಚಿಸಿ ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕು ಕಚೇರಿಯಲ್ಲಿ ಲಂಚದ ಹಾವಳಿ ಮಿತಿಮೀರಿದೆ. ಮಂಜೂರಾದ ಜಮೀನಿನಲ್ಲಿ ಒತ್ತುವರಿ ಬಿಡಿಸಿಕೊಡಲು ಇಲ್ಲಿನ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಲೋಕಾಯುಕ್ತ ಬಲೆಗೆ ಸಿಕ್ಕಿಕೊಂಡು ಅಮಾನತುಗೊಂಡ ಅಧಿಕಾರಿಗಳು ಮತ್ತೆ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಸಾರ್ವಜನಿಕರ ಸಮಸ್ಯೆ ಪರಿಹಾರವಾಗದು. ಈ ಬಗ್ಗೆ ಶಾಸಕರು ಗಮನಹರಿಸಬೇಕಿದೆ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಎಚ್.ಪಿ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಮುಖಂಡರಾದ ಬಿಎಸ್. ಜಯರಾಮಗೌಡ, ಎಂ.ಎಸ್. ಅನಂತ್, ಶಿವಕುಮಾರ್, ಪ್ರಸನ್ನ ಮರಗುಂದ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.