ಚಿಕ್ಕಮಗಳೂರು: ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಳ್ಳುವಂತೆ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ಸೀಮಿತವಾಗಿದ್ದ ಕಾರ್ಮಿಕ ಇಲಾಖೆಯ ವಿವಿಧ ಸವಲತ್ತುಗಳನ್ನು ಅಸಂಘಟಿತ ವಲಯದ ಕಾರ್ಮಿಕರಿಗೂ ವಿಸ್ತರಿಸಿದ್ದು, ಇದಕ್ಕಾಗಿಯೇ ಮೂರು ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.
ಈ ಹಿಂದೆ ಕಟ್ಟಡ ಕಾರ್ಮಿಕರಿಗೆ ಸೌವಲತ್ತುಗಳು ದೊರೆಯುತ್ತಿದ್ದವು. ಈಗ ಒಟ್ಟು 101 ದುಡಿಯುವ ವರ್ಗಗಳನ್ನು ಗುರುತಿಸಿ ಅವರಿಗೆ ಇಲಾಖೆಯ ಸವಲತ್ತುಗಳು ದೊರೆಯುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ 3 ಹೊಸ ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಗಿಗ್ ಕಾಯ್ದೆ ಅಡಿ ಜುಮಾಟೋ, ಸ್ವಿಗ್ಗಿ ಮತ್ತಿತರೆ ಆನ್‌ಲೈನ್ ಸೇವೆ ಸಲ್ಲಿಸುತ್ತಿರುವ 5 ಲಕ್ಷ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಸಿನೆಮಾ ಟಿಕೆಟ್ ದರದಲ್ಲಿ ಸೆಸ್ ಸಂಗ್ರಹಿಸಿ ಆ ಮೂಲಕ ಸಿನಿಮಾ ಕ್ಷೇತ್ರ, ನಾಟಕ ಕಂಪನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರಿಗೆ ಸೌಲಭ್ಯ ನೀಡಲಾಗುವುದು. ಸಾರಿಗೆ ಬಿಲ್ ಮೂಲಕ ವಾಹನ ಚಾಲಕರಿಗೆ ಸಹಾಯವಾಗಲಿದೆ. ಅಪಘಾತ ವಿಮೆಯಾಗಿ ₹5 ಲಕ್ಷ ನೀಡಲಿದ್ದೇವೆ. ವಾಹನ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಕೆಲಸವನ್ನು ಕಾರ್ಮಿಕ ಮಂಡಳಿ ಮಾಡಲಿದೆ ಎಂದು ತಿಳಿಸಿದರು.
ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಜಿಎಸ್‌ಟಿ ಸಂಗ್ರಹದಲ್ಲೂ ಮುಂಚೂಣಿಯಲ್ಲಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಾರಣ. ಆಶಾ ದೀಪ ಕಾರ್ಯಕ್ರಮದಲ್ಲಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕೆಲಸ ನೀಡುವವರಿಗೆ ₹2,500 ರವರೆಗೆ ನೆರವು ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರು ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಿದ್ದು, ಸಂಬಳ ಸಮಸ್ಯೆ ತಪ್ಪಲಿದೆ. ಮುಂದಿನ ದಿನಗಳಲ್ಲಿ ಮನೆ ಕೆಲಸ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಅಸಂಘಟಿತ ವಲಯವನ್ನು ಗುರುತಿಸಿ ಅವರಿಗೆ ಜೀವನಕ್ಕೆ ಭದ್ರತೆ ಹಾಗೂ ವಿಶ್ವಾಸವನ್ನು ತೋರಿಸುವುದು ಒಂದು ಉತ್ತಮವಾದ ಕಾರ್ಯ. ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವುದು ಸಾಮಾನ್ಯದ ಸಂಗತಿಯಲ್ಲ. ಅವರಿಗೆ ಮಾರ್ಗದರ್ಶನ ನೀಡುವುದು, ಅಗತ್ಯ ಸಹಾಯ ನೀಡುವುದು, ಆರೋಗ್ಯದ ರಕ್ಷಣೆ ಜೊತೆಗೆ ಅವರ ಕುಟುಂಬದ ಭದ್ರತೆ, ಅಪಘಾತವಾದರೆ, ಅನಾರೋಗ್ಯ ಆಕಸ್ಮಿಕ ಮರಣ ಹೊಂದಿದರೆ ಆ ಕುಟುಂಬಕ್ಕೆ ಭದ್ರತೆ ಒದಗಿಸಲು ಮುಂದಾಗಿರುವ ಈ ಕಾರ್ಯಕ್ರಮ ಉತ್ತಮವಾದುದು ಎಂದು ತಿಳಿಸಿದರು.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್.ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರ ಬಿ.ಎಚ್.ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್ ಇದ್ದರು.
ವೈದ್ಯಕೀಯ ಸೇವೆ: 381ಮಂದಿಗೆ
₹1.49 ಕೋಟಿ ನೆರವು 109 ಅಸಂಘಟಿತ ಕಾರ್ಮಿಕರಿಗೆ ಅಪಘಾತ ಸಹಜ ಮರಣವಾದವರಿಗೆ ಪರಿಹಾರ ಈ ರೀತಿಯ ಯೋಜನೆಗಳನ್ನು ನೀಡುವ ಮುಖಾಂತರ ಅವರ ಕುಟುಂಬದ ಭದ್ರತೆಯನ್ನು ಕಾಪಾಡಲಾಗಿದ್ದು 27 ಅಸಂಘಟಿತ ಕಾರ್ಮಿಕರ ವರ್ಗಗಳನ್ನು ಗುರುತಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಚ್.ಡಿ.ತಮ್ಮಯ್ಯ ಹೇಳಿದರು. ಕಾರ್ಮಿಕ ಇಲಾಖೆ ವತಿಯಿಂದ ಈ ಅಸಂಘಟಿತ ಕಾರ್ಮಿಕರಿಗೆ ಖಾಸಗಿ ಅಥವಾ ಸ್ವಂತ ವಾಹನ ಮಾಲೀಕರು ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರಿಗೆ ಆಕಸ್ಮಿಕ ಮರಣ ಸಂಭಾವ್ಯ ಪ್ರಕರಣಗಳಲ್ಲಿ ₹5 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ 78132 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕ ಮಂಡಳಿಯಿಂದ 31472 ಜನರಿಗೆ ಒಟ್ಟು ₹56.98 ಕೋಟಿಯನ್ನು ಕಾರ್ಮಿಕ ಇಲಾಖೆಯಿಂದ ನೇರವಾಗಿ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಜೊತೆಗೆ 21262 ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹19.95 ಕೋಟಿ ಒದಗಿಸಲಾಗಿದ್ದು ವೈದ್ಯಕೀಯ ಸೇವೆಗಾಗಿ 381 ಫಲಾನುಭವಿಗಳಿಗೆ ₹1.49 ಕೋಟಿ ನೆರವು ನೀಡಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.