ADVERTISEMENT

ಹದಗೆಟ್ಟ ರಸ್ತೆ ದುರಸ್ತಿಗೆ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬಸವರಾಜ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:55 IST
Last Updated 29 ಸೆಪ್ಟೆಂಬರ್ 2022, 6:55 IST
ಚಿಕ್ಕಮಗಳೂರಿನಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ಜಿಲ್ಲಾಧಿಕಾರಿ ರಮೇಶ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ಜಿಲ್ಲಾಧಿಕಾರಿ ರಮೇಶ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು: ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ರಸ್ತೆಗಳು ಹದಗೆಟ್ಟಿವೆ. ದುರಸ್ತಿಗೆ ತಕ್ಷಣವೇ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ (ಬೈರತಿ) ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಲೋಕೋಪಯೋಗಿ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದವರು ರಸ್ತೆಗಳ ದುರಸ್ತಿ ಕೈಗೆತ್ತಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಅರಣ್ಯ ವಿಚಾರ; 20 ದಿನಗಳಲ್ಲಿ ಪ್ರತ್ಯೇಕ ಸಭೆ’

ADVERTISEMENT

ಜಿಲ್ಲೆಯಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಬಹಳ ವಿಚಾರಗಳಿದ್ದು, ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದು ಒಳಿತು ಒಳಿತು. 20 ದಿನಗಳಲ್ಲಿ ವಿಶೇಷ ಸಭೆ ಏರ್ಪಡಿಸಲಾಗುವುದು’ ಎಂದು ಸಚಿವ ಬಸವರಾಜ ತಿಳಿಸಿದರು.

ಅರಣ್ಯ ಕಾಯ್ದೆ ಸೆಕ್ಷನ್ 4(1) ನಡಿ ಒಟ್ಟು 7168 ಅರ್ಜಿಗಳು ಸಲ್ಲಿಕೆಯಾಗಿವೆ. 3628 ಅರ್ಜಿಗಳ ವಿಚಾರಣೆ ನಡೆಸಿ 1344 ಇತ್ಯರ್ಥ ಪಡಿಸಲಾಗಿದೆ. ಬಾಕಿ ಅರ್ಜಿಗಳ ಇತ್ಯರ್ಥಕ್ಕೆ ಒಂದು ವರ್ಷ ಬೇಕಾಗುತ್ತದೆ ಎಂದು ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಸಭೆಗೆ ತಿಳಿಸಿದರು.

‘ಅಧಿಕಾರಿಗಳು ಮೊದಲು ಸ್ಥಳ ಪರಿಶೀಲನೆ ನಡೆಸಬೇಕು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಬೇಕು. ಸಮೀಕ್ಷೆ ಮಾಡಬೇಕು. ಈಗ ಪಹಣಿ ಇಂಡೀಕರಣ ಮಾಡದಂತೆ ಸೂಚನೆ ನೀಡಬೇಕು’ ಎಂದು ಶಾಸಕ ರಾಜೇಗೌಡ ಮನವಿ ಮಾಡಿದರು.

‘ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಮೋಜಣಿ ಮಾಡಿಸಬೇಕು. ಬಾಳೆಹೊನ್ನೂರಿನಲ್ಲಿ ಒಂದು ಅರಣ್ಯ ವವ್ಯಸ್ಥಾಪನಾ ಕಚೇರಿ ತೆರೆಯಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಕೋರಿದರು.

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ‘ಕಂದಾಯ ಮತ್ತು ಅರಣ್ಯ ಜಂಟಿ ಮೋಜಣಿಗೆ ಸಂಬಂಧಿಸಿದ 1018 ಸರ್ವೆ ನಂಬರ್‌ಗಳ ಪೈಕಿ 555 ಮುಗಿದಿವೆ. ಬಾಕಿ ಇರುವವನ್ನು ಮುಗಿಸಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಪರಿಹಾರ ವಿತರಿಸಲಾಗಿದೆ. ಕೆಲವರು ತಗಾದೆ ಮಾಡುತ್ತಿದ್ದಾರೆ’ ಎಂದು ಶಾಸಕ ಬೆಳ್ಳಿ ಪ್ರಕಾಶ್‌ ಹೇಳಿದರು.

ಜಿಲ್ಲೆಯಲ್ಲಿ ಅಮೃತ್‌ ಮಹಲ್‌ ಕಾವಲ್‌ಗೆ ಸೇರಿದ 13 ಕಾವಲ್‌ಗಳಿದ್ದು, ಒಟ್ಟು 14,339 ಎಕರೆ ಜಮೀನು ಇದೆ. ಈ ಪೈಕಿ 4514 ಎಕರೆ ಒತ್ತುವರಿಯಾಗಿದೆ ಎಂದು ಅನುಪಾಲನ ವರದಿಯಲ್ಲಿ ತಿಳಿಸಲಾಗಿದೆ. ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಕೇಳಿದರು.

ಪ್ರಕರಣದ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಅಜ್ಜಂಪುರದ ಅಮೃತ್‌ ಮಹಲ್‌ ಉಪನಿರ್ದೇಶಕ ತಿಳಿಸಿದರು.

ಅಮೃತ್‌ ಮಹಲ್‌ ಕಾವಲ್‌ ಜಾಗದಲ್ಲಿ ಜನರು ವಾಸವಾಗಿರುವುದು, ಕಚೇರಿ ಕಟ್ಟಡ, ಆಸ್ಪತ್ರೆ ಇತ್ಯಾದಿ ನಿರ್ಮಿಸಿರುವ ಕುರಿತು ಕೋರ್ಟ್‌ಗೆ ಮಾಹಿತಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರಮೇಶ್‌ ತಿಳಿಸಿದರು.

ಕಾಮಗಾರಿ ಮುಗಿಸಲು ಗಡುವು

‘ಚಿಕ್ಕಮಗಳೂರು ನಗರದಲ್ಲಿ ಕೈಗೆತ್ತಿಕೊಂಡಿರುವ ‘ಅಮೃತ್‌’ ಕಾಮಗಾರಿಯನ್ನು ಅಕ್ಟೋಬರ್‌ ಅಂತ್ಯದೊಳಗೆ, ಒಳಚರಂಡಿ ಕಾಮಗಾರಿಯನ್ನು ಡಿಸೆಂಬರ್‌ ಕೊನೆಯೊಳಗೆ ಮುಗಿಸಬೇಕು ಎಂದು ಸಚಿವ ಬಸವರಾಜ ತಿಳಿಸಿದರು.

ಅಮೃತ್‌ ಯೋಜನೆ 23 ಡಿಎಂಎಗಳಲ್ಲಿ 20 ಡಿಎಂಎ ಕಾಮಗಾರಿ ಮುಗಿದಿದೆ. ಒಳಚರಂಡಿ ಕಾಮಗಾರಿಯು ನಡೆಯುತ್ತಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ ಮಲ್ಲೇಶ್‌ ನಾಯಕ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು ಮಾತನಾಡಿ, ಒಟ್ಟು 1753 ಸಮುದಾಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಂಜೀವನಿ ಕೇಂದ್ರಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

‘600 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆಗೆ ಒತ್ತು ನೀಡಲಾಗಿದೆ. ಹಸಿರು ಗ್ರಾಮದ ಕಾರ್ಯಕ್ರಮದಡಿ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.5 ಲಕ್ಷ ಗಿಡ ನೆಟ್ಟು ಪೋಷಿಸಲಾಗುತ್ತಿದೆ.

ಸ್ವಚ್ಛ ಭಾರತ್‌ ಅಭಿಯಾನ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾದನದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ’ ಎಂದು ತಿಳಿಸಿದರು.

‘ಶಾಲೆಗಳ ಜಾಗ ದಾಖಲೀಕರಣ ನಡೆಯುತ್ತಿದೆ. ಗುರಿ ನಿಗದಿಪಡಿಸಿ ಈವರೆಗೆ ಶೇ 70 ದಾಖಲೀಕರಣ ಮಾಡಲಾಗಿದೆ. ಬಾಕಿ ಇರುವವನ್ನು ಶೀಘ್ರದಲ್ಲಿ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ರಮೇಶ್‌ ತಿಳಿಸಿದರು.

‘ಜಲ ಜೀವನ್‌ ಮಿಷನ್‌ ಕಾಮಗಾರಿ ಚುರುಕುಗೊಳಿಸಬೇಕು. ಅಧಿಕಾರಿಗಳೂ ಪ್ರತಿ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಬೇಕು. ಕಾಮಗಾರಿ ವಿವರ ನೀಡಬೇಕು’ ಎಂದು ಸಚಿವ ಬಸವರಾಜ ತಿಳಿಸಿದರು.

ಗಿರಿಶ್ರೇಣಿ ಪ್ರವೇಶಕ್ಕೆ ಪ್ರವಾಸಿ ವಾಹನಗಳಿಗೆ ಕೈಮರ ಚೆಕ್‌ಪೋಸ್ಟ್‌ ನಲ್ಲಿ ವಿಧಿಸುವ ಶುಲ್ಕವನ್ನು ಜಿಲ್ಲಾಧಿಕಾರಿ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಡಿಎಫ್‌ಒ ಎನ್‌.ಇ. ಕ್ರಾಂತಿ ತಿಳಿಸಿದರು.

ಶಾಲೆ ವಿರುದ್ಧ ಕ್ರಮಕ್ಕೆ ಸಚಿವ ಸೂಚನೆ

ತರೀಕೆರೆ ತಾಲ್ಲೂಕಿನ ಸಂತೆ ದಿಬ್ಬದ ಮತ್ತು ಅಜ್ಜಂಪುರ ತಾಲ್ಲೂಕಿನ ಗೆಜ್ಜೆಗೊಂಡನಹಳ್ಳಿ ಬಳಿಯ ಸಾಂದೀಪನಿ ಶಾಲೆಯವರು ನಿಯಮ ಪಾಲಿಸುತ್ತಿಲ್ಲ ಎಂಬ ದೂರುಗಳಿವೆ, ಈ ಶಾಲೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಚಿವ ಬಸವರಾಜ ಅವರು ಡಿಡಿಪಿಐಗೆ ಸೂಚನೆ ಸೂಚನೆ ನೀಡಿದರು.

ಈ ಎರಡು ಶಾಲೆಯವರು ಮಾನ್ಯತೆ ನವೀಕರಣ ಮಾಡಿಸಿಲ್ಲ. ನಿಯಮ ಗಾಳಿಗೆ ತೂರಿ ಶಾಲೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಿಇಒ ಮತ್ತು ಡಿಡಿಪಿಐ ವರದಿ ನೀಡಿದ್ದಾರೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಸಭೆಗೆ ತಿಳಿಸಿದರು.

ಡಿಡಿಪಿಐ ಜಿ.ರಂಗನಾಥ ಸ್ವಾಮಿ ಮಾತನಾಡಿ, ಶಾಲೆಯವರಿಗೆ ನೋಟಿಸ್‌ ನೀಡಲಾಗಿದೆ. ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.