ADVERTISEMENT

ಕಡೂರು: ಕೆಂಚಾಂಬ ದೇವಿ ಸಿಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:20 IST
Last Updated 18 ಜೂನ್ 2025, 13:20 IST
ಕಡೂರು ಪಟ್ಟಣದ ಶ್ರೀಕೆಂಚಾಂಬ ದೇವಿಯವರ ಸಿಡಿಸೇವೆ ಬುಧವಾರ ನಡೆಯಿತು
ಕಡೂರು ಪಟ್ಟಣದ ಶ್ರೀಕೆಂಚಾಂಬ ದೇವಿಯವರ ಸಿಡಿಸೇವೆ ಬುಧವಾರ ನಡೆಯಿತು   

ಕಡೂರು: ವೀರಭದ್ರಸ್ವಾಮಿ ರಥೋತ್ಸವದ ಪ್ರಯುಕ್ತ ಪಟ್ಟಣದ ಗ್ರಾಮದೇವತೆ ಶ್ರೀಕೆಂಚಾಂಬ ದೇವಿಯವರ ಸಿಡಿಸೇವೆ ಮಹೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು.

ದೇವಿಯವರ ಉತ್ಸವ ಮೂರ್ತಿಯು ಪಟ್ಟಣದ ಮನೆಗಳಿಗೆ ತೆರಳಿ ಸಿಡಿ ಸೇವೆಗಾಗಿ ಗುರುತಿಸಿದ ಮಕ್ಕಳನ್ನು ಕರೆತಂದಿತು. ಹರಕೆಯಂತೆ ಪೋಷಕರು ಮಕ್ಕಳ ಸಿಡಿಸೇವೆ ಅರ್ಪಿಸಿದರು.

ಸಿಡಿ ಮಹೋತ್ಸವದಲ್ಲಿ ಕೆಂಚಾಂಬದೇವಿ, ವೀರಭದ್ರಸ್ವಾಮಿ, ಮಲ್ಲೇಶ್ವರದ ಸ್ವರ್ಣಾಂಬ ದೇವಿ, ಬನಶಂಕರಿ, ಚೌಡ್ಲಾಪುರದ ಕರಿಯಮ್ಮ, ಭದ್ರಕಾಳಮ್ಮ ಪಾಲ್ಗೊಂಡಿದ್ದವು.

ADVERTISEMENT

ಸಿಡಿ ಸೇವೆಗೆ ಒಳಪಡುವ ಮಕ್ಕಳನ್ನು ಕಲಶದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಮಧ್ಯಾಹ್ನ 1.15ಕ್ಕೆ ಕೆಂಚಾಂಬ ದೇವರನ್ನು ಅರ್ಚಕರು ಸಿಡಿ ಆಡಿಸಿದ ನಂತರ ಮಕ್ಕಳ ಸಿಡಿಸೇವೆ ನಡೆಯಿತು.

ಸಿಡಿ ಕಾರ್ಯವನ್ನು ಪಟ್ಟಣದ ಜನಮಿತ್ರ ದಿ.ನಾರಾಯಣಪ್ಪ ಕುಟುಂಬದವರಾದ ಧರಣಿಪಾಲ್ ತಮ್ಮ ಮನೆಯಿಂದ ಸಿಡಿ ಕೊಂಡಿಯನ್ನು ಮೆರವಣಿಗೆಯಲ್ಲಿ ತಂದು ಸಿಡಿ ಸೇವೆ ಅರ್ಪಿಸಿದರು. ಸಿಡಿಮರದಲ್ಲಿ ಕುಳಿತು ಬ್ಯಾಗಡೇಹಳ್ಳಿಯ ರಾಮಣ್ಣ ವಂಶಸ್ಥರು ಸಿಡಿ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ 12 ಹರಿವಾಣದ ಗುಡಿಕಟ್ಟಿನ ಸದಸ್ಯರು, ದೇವಾಲಯದ ಅರ್ಚಕರು, ಮಹಿಳೆಯರು ಮತ್ತು ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.