ADVERTISEMENT

‘ರಾಜಕಾರಣವೆಂದರೆ ಚುನಾವಣೆ ಎದುರಿಸುವುದಲ್ಲ’

ಕೊಪ್ಪದಲ್ಲಿ ಆಯೋಜಿಸಿದ್ದ ‘ಶಿವದೂತೆ ಗುಳಿಗೆ’ ತುಳು ನಾಟಕ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:46 IST
Last Updated 7 ಡಿಸೆಂಬರ್ 2022, 5:46 IST
‘ಕಾಂತಾರ’ ಸಿನಿಮಾದಲ್ಲಿ ಗುರುವ ಪಾತ್ರದಲ್ಲಿ ನಟಿಸಿದ ಸ್ವರಾಜ್ ಶೆಟ್ಟಿ, ‘ಶಿವದೂತೆ ಗುಳಿಗೆ’ ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಂಗೀತ ನಿರ್ದೇಶಕ ಎ.ಕೆ.ವಿಜಯ್ ಕುಮಾರ್ ಅವರನ್ನು ಕೊಪ್ಪದ ‘ರಂಗ ಸಿಂಗಾರ’ ತಂಡದಿಂದ ಅಭಿನಂದಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ ಇದ್ದರು.
‘ಕಾಂತಾರ’ ಸಿನಿಮಾದಲ್ಲಿ ಗುರುವ ಪಾತ್ರದಲ್ಲಿ ನಟಿಸಿದ ಸ್ವರಾಜ್ ಶೆಟ್ಟಿ, ‘ಶಿವದೂತೆ ಗುಳಿಗೆ’ ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಂಗೀತ ನಿರ್ದೇಶಕ ಎ.ಕೆ.ವಿಜಯ್ ಕುಮಾರ್ ಅವರನ್ನು ಕೊಪ್ಪದ ‘ರಂಗ ಸಿಂಗಾರ’ ತಂಡದಿಂದ ಅಭಿನಂದಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ ಇದ್ದರು.   

ಕೊಪ್ಪ: ‘ರಾಜಕಾರಣವೆಂದರೆ ಕೇವಲ ಚುನಾವಣೆ ಎದುರಿಸುವುದು, ಅಧಿಕಾರ ಸಂಪಾದಿಸುವುದು ಅಷ್ಟೇ ಅಲ್ಲ, ಊರನ್ನು ಸಾಂಸ್ಕೃತಿಕವಾಗಿ ಜೋಡಿಸುವುದು ನಮ್ಮ ಕರ್ತವ್ಯವಾಗಬೇಕು’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಭಾನುವಾರ ‘ರಂಗ ಸಿಂಗಾರ’ ತಂಡದಿಂದ ಆಯೋಜಿಸಿದ್ದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ, ಮಂಗಳೂರು ‘ಕಲಾ ಸಂಗಮ’ನಾಟಕ ಕಲಾ ತಂಡದಿಂದ ಪ್ರದರ್ಶನಗೊಂಡ ‘ಶಿವದೂತೆ ಗುಳಿಗೆ’ ನಾಟಕದ ವೇದಿಕೆಯಲ್ಲಿ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಧಾರ್ಮಿಕ ಸೇವೆ, ಕಲೆ, ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದ ಪ್ರೋತ್ಸಾಹಕನಾಗಿದ್ದೇನೆ. ಜಾತಿ, ಧರ್ಮ ಭೇದ ಮರೆತು ನಾವೆಲ್ಲ ಒಂದು ಎಂದು ಒಗ್ಗೂಡಲು ಸಾಂಸ್ಕೃತಿಕ ವೇದಿಕೆ ಸಹಕಾರಿಯಾಗುತ್ತದೆ. ‘ಶಿವದೂತೆ ಗುಳಿಗೆ’ಯು ಮಲೆನಾಡು, ಕರಾವಳಿಯ ಸಾಂಸ್ಕೃತಿಕ ಸಂಗಮವಾಗಿದೆ’ ಎಂದು ವರ್ಣಿಸಿದರು.

ADVERTISEMENT

ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಒಬ್ಬ ರಾಜಕಾರಣಿ ಜವಾಬ್ದಾರಿ ಎಂದರೆ, ಚುನಾವಣೆ ಗೆಲುವಿಗಾಗಿ ಜನರ ನಡುವೆ ಒಡಕುಂಟು ಮಾಡಿ ತಾರತಮ್ಯ ಭಾವನೆ ಸೃಷ್ಟಿಸುವುದಲ್ಲ. ಊರನ್ನು ಒಟ್ಟಾಗಿರಿಸಿಕೊಂಡು ಎಲ್ಲರೂ ಒಗ್ಗೂಡಿ ಬಾಳಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿದೆ. ಕೊಪ್ಪದ ಇತಿಹಾಸದಲ್ಲಿ ನಾಟಕವೊಂದನ್ನು ನೋಡಲು ಆರೂವರೆ ಸಾವಿರಕ್ಕೂ ಹೆಚ್ಚು ಜನ ಸೇರಿರುವುದು ಸಾಂಸ್ಕೃತಿಕ ಇತಿಹಾಸದಲ್ಲಿ ಬರೆದಿಡುವಂತದ್ದಾಗಿದೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಾಯೋಜಕತ್ವದಲ್ಲಿ ನಾಟಕ ಆಯೋಜಿಸಲಾಗಿತ್ತು. ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ’ ನಿರ್ಮಾಪಕ ರವಿ ರೈ, ಮುಖಂಡರಾದ ಎಚ್.ಎಂ.ನಟರಾಜ್, ಕುಕ್ಕುಡಿಗೆ ರವೀಂದ್ರ, ಎಚ್.ಎಂ.ಸತೀಶ್, ಸುಜಾತ ಕೃಷ್ಣಪ್ಪ, ಪುಷ್ಪಾ ರಾಜೇಗೌಡ, ಜುಬೇದಾ, ಅನ್ನಪೂರ್ಣ ನರೇಶ್, ಜೆ.ಎಂ.ಶ್ರೀಹರ್ಷ, ‘ರಂಗ ಸಿಂಗಾರ’ ತಂಡದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.