
ಕೊಪ್ಪ: ಪಟ್ಟಣ ಸಮೀಪದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಮತ್ತು ಕಲಿ ಕಲಿಸು ಯೋಜನೆಯ ಚಟುವಟಿಕೆಗಾಗಿ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಸಮೀಪದ ಸತೀಶ್ ಶೆಟ್ಟಿ ಅವರ ಮಾಲೀಕತ್ವದ ಕಂಚಿನಕೊಡಿಗೆ ಎಸ್ಟೇಟ್‌ನಲ್ಲಿ ಕಾಫಿ ಹೂವುಗಳು ಅರಳಿದ್ದು, ಅದರ ಮೇಲೆ ಕುಳಿತು ಮಕರಂದ ಹೀರುವ ಜೇನುಹುಳುಗಳ(ಪರಾಗ ಸ್ಪರ್ಶ) ಬಗ್ಗೆ ತಿಳಿಯಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದರು.
ಕಾಫಿ ತೋಟದ ವ್ಯವಸ್ಥಾಪಕ ಬಾಲಕೃಷ್ಣ ಅವರು ಮಕ್ಕಳಿಗೆ ಕಾಫಿ ಹೂವು ಅರಳಿದಾಗ ಪರಾಗಸ್ಪರ್ಶದಲ್ಲಿ ಜೇನು ಹುಳುಗಳ ಪಾತ್ರ, ಜೇನು ಹುಳುಗಳು ಮಕರಂದ ಹೀರುವ ಬಗೆ, ಜೇನು ನಿರುಪದ್ರವಿಯಾಗಿರುವ ಮತ್ತು ಸಿಟ್ಟಾಗುವ ಸಂದರ್ಭಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕಿ ಭಾರತಿ ಎ. ಮಾತನಾಡಿ, ‘ಬೆಂಗಳೂರಿನ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ‘ಜೇನು-ನಾನು’ ಎಂಬ ನಿಸರ್ಗದ ನಡುವೆ ಕಲಿಕೆಯ ಕಲಾಂತರ್ಗತ ಯೋಜನೆ ನಡೆಸುತ್ತಿದ್ದು, ಮಕ್ಕಳು ಜೇನು ವೀಕ್ಷಣೆಯ ಅನುಭವಗಳನ್ನು ಕಲಾ ಮಾಧ್ಯಮದ ಮೂಲಕ ದಾಖಲಿಸಿದ್ದಾರೆ’ ಎಂದು ತಿಳಿಸಿದರು.
ಸಹ ಶಿಕ್ಷಕಿ ಆಶಾಲತಾ ಬಿ., ಅತಿಥಿ ಶಿಕ್ಷಕಿ ಸುಮಾ, ಸ್ಥಳೀಯರಾದ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.