ADVERTISEMENT

ಕೊಪ್ಪ | ನೀರಿಗಿಲ್ಲ ಕೊರತೆ: ವಿದ್ಯುತ್ ಸಮಸ್ಯೆ

ನೀರಿಗೆ ತುಂಗಾನದಿ, ಹಿರೀಕೆರೆ ಆಸರೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:59 IST
Last Updated 27 ಫೆಬ್ರುವರಿ 2026, 7:59 IST
ಕೊಪ್ಪ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಹಿರೀಕೆರೆಯ ನೋಟ
ಕೊಪ್ಪ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಹಿರೀಕೆರೆಯ ನೋಟ   

ಕೊಪ್ಪ: ಪಟ್ಟಣದ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ, ಪ್ರತಿವರ್ಷ ವಿದ್ಯುತ್ ಸಮಸ್ಯೆಯಿಂದ ನೀರು ಸಮರ್ಪಕವಾಗಿ ಪೂರೈಸಲು ತೊಂದರೆಯಾಗುತ್ತಿದೆ.

ಮಲೆನಾಡಿನ ಮಡಿಲನಂತಿರುವ ಕೊಪ್ಪ ಪಟ್ಟಣದಲ್ಲಿ 1,800 ಕುಟುಂಬಗಳಿದ್ದು, ಅವುಗಳಿಗೆ ನೀರೊದಗಿಸಲು ಪಟ್ಟಣ ಪಂಚಾಯಿತಿ ಎರಡು ಮೂಲಗಳನ್ನು ಕಂಡುಕೊಂಡಿದೆ. ಕುಡಿಯುವ ನೀರಿಗೆ ಹಿರೀಕೆರೆ, ತುಂಗಾ ನದಿಯನ್ನು ಅವಲಂಬಿಸಿದೆ. ಜನವರಿಯಿಂದ ಜೂನ್ ತನಕ ತುಂಗಾ ನದಿಯಿಂದ, ಜುಲೈನಿಂದ ಡಿಸೆಂಬರ್ ತನಕ ಹಿರೀಕೆರೆಯಿಂದ ನೀರು ಒದಗಿಸಲಾಗುತ್ತದೆ.

ತುಂಗಾ ನದಿಯಲ್ಲಿ ನೀರಿದ್ದರೂ ಅದನ್ನು ಪಟ್ಟಣದ ತನಕ ತರುವುದು ಸವಾಲಿನ ಕೆಲಸ. ನದಿಯಿಂದ ನೀರು ಶುದ್ಧೀಕರಣ ಘಟಕದ ತನಕ ಬರಲು ಮೂರು ಪಂಪ್‌ಹೌಸ್‌ಗಳನ್ನು ದಾಟಬೇಕು. ಮೂರು ಪಂಪ್‌ ಹೌಸ್‌ಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಇರಬೇಕಾಗುತ್ತದೆ. ವಿದ್ಯುತ್ ಅಡಚಣೆಯಾದರೆ ನೀರು ತಲುಪುವುದು ಕಷ್ಟ. ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

ADVERTISEMENT

ಈ ನೀರನ್ನು ಅವಲಂಬಿಸಿ ಪಟ್ಟಣದ 11 ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 1,800 ಕುಟುಂಬಗಳು ವಾಸವಾಗಿದ್ದು, 1,650 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಒಬ್ಬ ವ್ಯಕ್ತಿಗೆ 130 ಲೀಟರ್ ನೀರು ಪೂರೈಸಬೇಕಿದ್ದು, ಪ್ರಸ್ತುತ 80ರಿಂದ 90 ಲೀಟರ್ ನೀರು ಒದಗಿಸಲಾಗುತ್ತಿದೆ.

ಈ ಬಾರಿಯೂ ಉತ್ತಮ ಮಳೆಯಿಂದ ಕೆರೆ ಭರ್ತಿಯಾಗಿತ್ತು. ಪ್ರಸ್ತುತ ಹಿರೀಕೆರೆಯಿಂದ ಒಂದು ತಿಂಗಳ ಕಾಲ ನೀರು ಪೂರೈಸುವಷ್ಟು ಸಂಗ್ರಹವಿದೆ. ಆದರೆ, ಕಳೆದೊಂದು ವಾರದಿಂದ ನದಿಯಿಂದ ನೀರು ಪೂರೈಸಲಾಗುತ್ತಿದೆ. ಒಂದು ವೇಳೆ ನದಿ ನೀರು ಪೂರೈಕೆ ಸಾಧ್ಯವಾಗದ ಪರಿಸ್ಥಿತಿ ಬಂದರೆ ಜನರಿಗೆ ಸಮಸ್ಯೆಯಾಗದಂತೆ ಕೆರೆ ನೀರು ಬಳಸಿಕೊಳ್ಳಲು ಪಟ್ಟಣ ಪಂಚಾಯಿತಿ ಯೋಜಿಸಿದೆ.

‘ಇಲ್ಲಿಯವರೆಗೆ ಪ್ರತಿದಿನ ಅರ್ಧ ಗಂಟೆ ನೀರು ಪೂರೈಸುತ್ತಿದ್ದೆವು. ಇನ್ನುಮುಂದೆ ಎರಡು ದಿನಕ್ಕೆ ಒಮ್ಮೆ ಒಂದು ಗಂಟೆ ಕಾಲ ನೀರು ಕೊಡುತ್ತೇವೆ. ನಮಗೆ ಸಮಸ್ಯೆಯಾಗಿರುವುದು ವಿದ್ಯುತ್ ಹೊರತು ನೀರಿನದ್ದಲ್ಲ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದರು.

ಕುರಿಯಾ ಕೋಸ್

ಪಟ್ಟಣಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ವಿದ್ಯುತ್ ಸಮರ್ಪಕವಾಗಿ ಸಿಕ್ಕರೆ ನೀರು ಪೂರೈಕೆ ಯಾವುದೇ ಸಮಸ್ಯೆ ಆಗುವುದಿಲ್ಲ

–ಕುರಿಯಾ ಕೋಸ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.