ADVERTISEMENT

ಮೂಡಿಗೆರೆ: ಸ್ವಚ್ಛತೆಯಿಲ್ಲದೇ ಸೊರಗಿದ ಬಸ್‌ ನಿಲ್ದಾಣ!

ಮೂಗು ಮುಚ್ಚಿಕೊಂಡು ಪ್ರಯಾಣಿಸಬೇಕಾದ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:07 IST
Last Updated 11 ನವೆಂಬರ್ 2025, 4:07 IST
ಮೂಡಿಗೆರೆಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಸದ ರಾಶಿ
ಮೂಡಿಗೆರೆಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಸದ ರಾಶಿ   

ಮೂಡಿಗೆರೆ: ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವು ಕಸದ ರಾಶಿಯಿಂದ ನಾರುತ್ತಿದ್ದು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಪ್ರಯಾಣಿಸುವಂತಾಗಿದೆ.

ನಿಲ್ದಾಣದಲ್ಲಿ ಸಕಲೇಶಪುರ ಹಾಗೂ ಬೇಲೂರಿಗೆ ಸಂಚರಿಸುವ ಬಸ್‌ಗಳನ್ನು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ನಿಲ್ಲಿಸದೆ ಕಾಂಪೌಂಡ್ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತದೆ. ಈ ಬಸ್‌ಗಳು ನಿಲ್ಲುವ ಸ್ಥಳದಲ್ಲಿ ಕಸದ ರಾಶಿಯಿದೆ. ಸಕಲೇಶಪುರ ಹಾಗೂ ಬೇಲೂರು ಮಾರ್ಗದ ಒಂದೊಂದು ಬಸ್‌ಗಳು ಹೊರಡಲು ಅರ್ಧ ಗಂಟೆ ಕಾಯಬೇಕು. ಅಷ್ಟರವರೆಗೆ ಬಸ್ಸಿನೊಳಗೆ ಕುಳಿತಿರುವ ಪ್ರಯಾಣಿಕರು ಕಸ, ತ್ಯಾಜ್ಯದ ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಕುಳಿತುಕೊಳ್ಳಬೇಕಾಗಿದೆ.

ನಿಲ್ದಾಣದ ಹೋಟೆಲ್ ಇರುವ ಭಾಗದಲ್ಲಿ ಖಾಲಿ ಜಾಗವಿದ್ದು, ಅಲ್ಲಿ ಪೊದೆ ಬೆಳೆದಿದೆ. ಕಸದಿಂದ ಈ ಸ್ಥಳವೂ ತುಂಬಿ ಹೋಗಿದ್ದು, ಶೌಚಾಲಯವಿದ್ದರೂ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಈ ಸ್ಥಳವನ್ನೇ ಬಳಸುತ್ತಿದ್ದಾರೆ. ಅಕ್ಕಪಕ್ಕದ ನಿವಾಸಿಗಳು, ಅಂಗಡಿಗಳ ವರ್ತಕರು ದುರ್ನಾತದಲ್ಲಿಯೇ ದಿನ ಕಳೆಯುವಂತಾಗಿದೆ. ಶೌಚಗೃಹದ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಿದ್ದರೂ ಶುಚಿತ್ವ ಕಣ್ಮರೆಯಾಗಿದೆ ಎಂಬುದು ಪ್ರಯಾಣಿಕರ ಅಳಲು. ಶೌಚಗೃಹದ ಇಂಗು ಗುಂಡಿಯಿಂದ ಪಕ್ಕದ ಹೊಯ್ಸಳ ಕ್ರೀಡಾಂಗಣಕ್ಕೆ ಕೊಳಚೆ ನೀರು ಹರಿಯುತ್ತಿದೆ. ಆ ಪರಿಸರದಲ್ಲಿ ಜನ ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ.

ADVERTISEMENT


ನಿಲ್ದಾಣದ ಆಗಮನ ಹಾಗೂ ನಿರ್ಗಮನ ಎರಡು ದ್ವಾರದ ಕಾಂಪೌಂಡ್ ಬಳಿ ಬೃಹತ್ ಗುಂಡಿಗಳಿವೆ. ಅಲ್ಲಿ ಮಳೆ ನೀರು ಶೇಖರಣೆಗೊಂಡು ಬಸ್‌ಗಳು ಸಂಚರಿಸುವಾಗ ಪಾದಚಾರಿಗಳ ಮೇಲೆ ಕೊಳಚೆ ನೀರು ಚಿಮ್ಮುತ್ತದೆ. ನಿಲ್ದಾಣದ ಗೇಟ್ ಬಳಿ ಕೆ.ಎಂ.ರಸ್ತೆ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಾಲ್ಕೈದು ಕೈಗಾಡಿಗಳನ್ನು ನಿಲ್ಲಿಸಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಬೀದಿ ಬದಿ ವ್ಯಾಪಾರಿಗಳು, ಗ್ರಾಹಕರು, ಪ್ರಯಾಣಿಕರು ಆ ಸ್ಥಳದಲ್ಲಿ ಗುಂಪು ಸೇರುವುದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಅಡ್ಡಿಯಾಗುತ್ತಿದೆ.

ನಿಲ್ದಾಣದೊಳಗೆ ಎಲ್ಲೆಂದರಲ್ಲಿ ಖಾಸಗಿ ವಾಹನ ಹಾಗೂ ಬೈಕ್‌ಗಳನ್ನು ದಿನಗಟ್ಟಲೆ ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ಬಸ್ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ.


'2017ರಲ್ಲಿ ಉದ್ಘಾಟನೆಯಾದ ಹೊಸ ನಿಲ್ದಾಣ 8 ವರ್ಷದಲ್ಲಿ ನಿರ್ವಹಣೆ ಇಲ್ಲದೆ ಸೊರಗಿದೆ. ನಿಲ್ದಾಣದಲ್ಲಿನ ಎಲ್ಇಡಿ ಟಿವಿಯಲ್ಲಿ ಬಸ್ ಸಂಚಾರದ ಮಾಹಿತಿ ಮತ್ತು ವೇಳಾಪಟ್ಟಿಯನ್ನು ಒಮ್ಮೆ ಕನ್ನಡದಲ್ಲಿ ಮತ್ತೊಮ್ಮೆ ಇಂಗ್ಲೀಷ್ ನಲ್ಲಿ ಪ್ರಕಟಿಸಲಾಗುತ್ತದೆ. ಕನ್ನಡ ಹಾಗೂ ಇಂಗ್ಲಿಷ್ ವೇಳಾಪಟ್ಟಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ನಿಲ್ದಾಣಾಧಿಕಾರಿಗಳು ಯಾವುದೇ ಅವ್ಯವಸ್ಥೆಯನ್ನು ಗಮನಿಸುತ್ತಿಲ್ಲ. ನಿಲ್ದಾಣದ ಆವರಣದಲ್ಲಿರುವ ಕಸದ ರಾಶಿಯನ್ನು ತೆರವುಗೊಳಿಸಬೇಕು. ಖಾಸಗಿ ವಾಹನಗಳಿಗೆ ನಿಲ್ದಾಣದೊಳಗೆ ಪ್ರವೇಶ ನಿಷೇಧಿಸಬೇಕು. ಶೌಚಗೃಹ ಹಾಗೂ ಪರಿಸರವನ್ನು ಸ್ವಚ್ಛಗೊಳಿಸಬೇಕು' ಎಂದು ಪ್ರಯಾಣಿಕ ಕೆ.ಕೆ.ರಾಮಯ್ಯ ಒತ್ತಾಯಿಸಿದರು.

ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆಗೆ ಇನ್ನಷ್ಟು ಆದ್ಯತೆ ನೀಡಲಾಗುವುದು. ಆವರಣದ ಮರದ ರೆಂಬೆಗಳನ್ನು ಮಳೆಗಾಲದಲ್ಲಿ ಕತ್ತರಿಸಲಾಗಿದೆ. ಖಾಸಗಿ ವಾಹನಗಳು ಪ್ರವೇಶಿಸದಂತೆ ನಿಲ್ದಾಣದ ಆವರಣದಲ್ಲಿ ನಾಮಫಲಕ ಅಳವಡಿಸಲಾಗಿದೆ. ಹಿರಿಯ ನಾಗರಿಕರು, ವಿಶೇಷ ಚೇತನರು ನಿಲ್ದಾಣದೊಳಗೆ ಖಾಸಗಿ ವಾಹನದಲ್ಲಿ ಪ್ರವೇಶಿಸಲು ಮಾತ್ರ ಅವಕಾಶ ನೀಡಲಾಗಿದೆ. ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನ ಪಾರ್ಕಿಂಗ್ ಮಾಡದಂತೆ ಹಗ್ಗ ಕಟ್ಟಲಾಗಿದೆ. ಆದರೂ ಕೆಲವು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಅದನ್ನು ತೆರವುಗೊಳಿಸಲಾಗುವುದು. ಹೊಸದಾಗಿ ಹೋಂ ಗಾರ್ಡ್ ಒಬ್ಬರನ್ನು ನೇಮಿಸಲಾಗಿದೆ. ಅವರು ನಿಲ್ದಾಣದಲ್ಲಿ ಕಟ್ಟಚ್ಚರ ವಹಿಸುತ್ತಿದ್ದಾರೆ ಎಂದು ಕೆಎಸ್ಆರ್‌ಟಿಸಿ ಘಟಕ ವ್ಯವಸ್ಥಾಪಕ ಮಂಜುನಾಥ್ ಪ್ರತಿಕ್ರಿಯಿಸಿದರು.

ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಖಾಸಗೀ ವಾಹನಗಳು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.