ADVERTISEMENT

ಹಾಂದಿ: ವೇಗದೂತ ಬಸ್ ನಿಲುಗಡೆ ಆರಂಭ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 5:17 IST
Last Updated 15 ಡಿಸೆಂಬರ್ 2025, 5:17 IST
ಹಾಂದಿಯ ವೃತ್ತದಲ್ಲಿ ನಿಲುಗಡೆ ಪ್ರಾರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಹಾರ ಹಾಕಿ ಸ್ಥಳೀಯ ಗ್ರಾಮಸ್ಥರ ಸ್ವಾಗತಿಸಿದರು
ಹಾಂದಿಯ ವೃತ್ತದಲ್ಲಿ ನಿಲುಗಡೆ ಪ್ರಾರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಹಾರ ಹಾಕಿ ಸ್ಥಳೀಯ ಗ್ರಾಮಸ್ಥರ ಸ್ವಾಗತಿಸಿದರು   

ಆಲ್ದೂರು: ಚಿಕ್ಕಮಗಳೂರಿನಿಂದ ಕಬ್ಬಿಣ ಸೇತುವೆ ಮಾರ್ಗವಾಗಿ ಕವಲೊಡೆದು ಮೂಡಿಗೆರೆ–ಧರ್ಮಸ್ಥಳ–ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–173ರಲ್ಲಿ ಸಂಚರಿಸುವ ಕೆಎಸ್ಆರ್‌ಟಿಸಿ ವೇಗದೂತ ಬಸ್‌ಗಳಿಗೆ ಹಾಂದಿ ಗ್ರಾಮದ ವೃತ್ತದ ಬಳಿ ನಿಲುಗಡೆ ನೀಡಲಾಗಿದೆ.

ಇದುವರೆಗೆ ನಿಲುಗಡೆ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದ ಈ ಭಾಗದ ಜನರ ದೀರ್ಘಕಾಲದ ಬೇಡಿಕೆ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎ.ಆರ್. ರೆಹಮಾನ್ ಅವರ ಸತತ ಪ್ರಯತ್ನದ ಫಲವಾಗಿ ಈಡೇರಿದೆ. ಶುಕ್ರವಾರ ಸಾಂಕೇತಿಕವಾಗಿ ಬಸ್ ನಿಲುಗಡೆ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗೆ ಹಾರ ಹಾಕಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಆರ್. ರೆಹಮಾನ್, ಹಾಂದಿ ಗ್ರಾಮವು ಪ್ರಮುಖ ವೃತ್ತವಾಗಿದ್ದು, ಆಲ್ದೂರು ಮಾರ್ಗದಿಂದ ಮೂಡಿಗೆರೆ, ಧರ್ಮಸ್ಥಳ ಹಾಗೂ ಮಂಗಳೂರಿಗೆ ತೆರಳುವ ಪ್ರಯಾಣಿಕರು ಬಸ್ ಸೌಲಭ್ಯ ಇಲ್ಲದ ಕಾರಣ ಹಾಂದಿ ವೃತ್ತಕ್ಕೆ ಬಂದು ಸಂಚರಿಸಬೇಕಾಗಿತ್ತು ಎಂದು ಹೇಳಿದರು.

ADVERTISEMENT

ಇಂದ್ರವಳ್ಳಿ, ಹೊಸಪೇಟೆ, ಬಸ್ಕಲ್, ಗೆಂಡೆಹಳ್ಳಿ, ನಂದಿಪುರ, ಮಾಕೋನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನರು ಇದೇ ವೃತ್ತವನ್ನು ಅವಲಂಬಿಸಿದ್ದರು. ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆ ಹಾಗೂ ತಪಾಸಣೆಗೆ ತೆರಳುವ ಸಂದರ್ಭದಲ್ಲೂ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ಮೊದಲಾದ ಶ್ರೀಕ್ಷೇತ್ರಗಳಿಗೆ ತೆರಳುವ ಭಕ್ತರು ಹಾಗೂ ಮೂಡಿಗೆರೆ ಪಟ್ಟಣದ ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ಬಸ್ ನಿಲುಗಡೆ ಅಗತ್ಯವಾಗಿತ್ತು ಎಂದು ವಿವರಿಸಿದರು.

2012ರಲ್ಲೇ ಅಂದಿನ ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಕೆಎಸ್ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಬಂದಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ನಿರ್ದೇಶನದಂತೆ ವೇಗದೂತ ಬಸ್‌ಗಳಿಗೆ ನಿಲುಗಡೆ ನೀಡಲಾಗಿದೆ. ದಶಕಗಳ ಹೋರಾಟಕ್ಕೆ ಜಯ ದೊರೆತಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.