ADVERTISEMENT

ಚಿಕ್ಕಮಗಳೂರು | ಸರ್ಕಾರಿ ಜಾಗದಲ್ಲಿ ಲೇಔಟ್‌: ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 15:48 IST
Last Updated 7 ಫೆಬ್ರುವರಿ 2025, 15:48 IST
ಎ.ಸಿ. ಕುಮಾರ್
ಎ.ಸಿ. ಕುಮಾರ್   

ಚಿಕ್ಕಮಗಳೂರು: ಭೂಸ್ವಾಧೀನ ಪಡಿಸಿಕೊಂಡು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ 1.35 ಎಕರೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ನಗರಸಭೆ ಸದಸ್ಯ ಎ.ಸಿ.ಕುಮಾರಗೌಡ ಒತ್ತಾಯಿಸಿದರು.

ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದ ಸರ್ವೆ ನಂ. 6ರಲ್ಲಿ 1 ಎಕರೆ 35 ಗುಂಟೆ ಪ್ರದೇಶವು ಸರ್ಕಾರಕ್ಕೆ ಸೇರಿದ ಇನಾಂ ಭೂಮಿಯಾಗಿದೆ. ಈ ಜಾಗವನ್ನು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿ ಖಾಸಗಿಯವರಿಗೆ ಮಾರಾಟ ಮಾಡಿದ್ದು, ಈಗ ಅಲ್ಲಿ ಬಡಾವಣೆ ನಿರ್ಮಾಣವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಹಿಂದೆ ಮೈಸೂರು ರಾಜ್ಯದ ಆಡಳಿತದಲ್ಲಿ ಸಗುನಯ್ಯ ಎಂಬುವರು ಸಾಗುವಳಿ ಮಾಡಿಕೊಂಡಿದ್ದರು. 1964ರಲ್ಲಿ ಭೂಸ್ವಾಧೀನವಾಗಿದ್ದು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ನೀಡಲಾಗಿದೆ. ಸಗುನಯ್ಯ ಅವರಿಗೆ ₹12,250 ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಆದರೆ, ಸಗುನಯ್ಯ ಅವರೇ ವಾರಸುದಾರರು ಎಂದು ಹೇಳಿಕೊಂಡು ಕೆಲವರು ಈ ಸ್ವತ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮುಚ್ಚಿಟ್ಟು, ವಸತಿ ಬಡಾವಣೆಗೆ ಭೂ ಪರಿವರ್ತನೆ ಪಡೆದಿದ್ದಾರೆ. ಈ ಕೃತ್ಯದಲ್ಲಿ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು, ತಹಸೀಲ್ದಾರ್‌ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಬಡಾವಣೆ ನಿರ್ಮಾಣ ಕಾಮಗಾರಿ ತಡೆ ಹಿಡಿದು ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಗೋಪಿ, ದಿನೇಶ್, ಮುಖಂಡರಾದ ಇರ್ಷಾದ್ ಅಹಮದ್, ಸಿ.ಕೆ.ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.