ADVERTISEMENT

ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಟ್ರಂ‌‍‍ಪ್‌ಗೆ ಸಹಾಯವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 18:58 IST
Last Updated 22 ಡಿಸೆಂಬರ್ 2025, 18:58 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಚಿಕ್ಕಮಗಳೂರು: ‌‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ತೆರಿಗೆ ಹಾಕುವುದರಲ್ಲಿ ನಿಪುಣರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲಹೆಗಾರರಾಗಿ ಹೋಗಲಿ. ಟ್ರಂ‌ಪ್ ಅವರಿಗೆ ನೆರವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೆರಿಗೆ ವಿಷಯದಲ್ಲಿ ಟ್ರಂಪ್ ತಲೆಕೆಡಿಸಿಕೊಂಡಿದ್ದಾರೆ. ತಜ್ಞರು ಸಿಗದೆ ಹಿಂಸೆ ಅನುಭವಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆರ್ಥಿಕ ಜ್ಞಾನಕ್ಕೆ ಕರ್ನಾಟಕ ರಾಜ್ಯ ಅತ್ಯಂತ ಚಿಕ್ಕದು. ಟ್ರಂಪ್ ಇಡೀ ಜಗತ್ತಿಗೆ ಏನಾದರೂ ಮಾಡಬೇಕು ಎಂದು ಹೊರಟಿದ್ದಾರೆ. ಸಿದ್ದರಾಮಯ್ಯ ಅವರು ಟ್ರಂಪ್ ಜತೆಗಿದ್ದರೆ ಎಲ್ಲರಿಗೂ ಒಳ್ಳೆಯಾದಾಗಲಿದೆ’ ಎಂದು ಲೇವಡಿ ಮಾಡಿದರು.

‘ಬಜೆಟ್ ನಾನೇ ಮಂಡಿಸುವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ, ದೇವರ ಜತೆ ಮಾತನಾಡಿದ್ದೇನೆ ಎಂದು ಮತ್ತೊಬ್ಬರು ಹೇಳುತ್ತಾರೆ. 45 ದಿನದಲ್ಲಿ ಏನಾಗಲಿದೆಯೋ ನೋಡೋಣ. ಯಾರು ಸಿ.ಎಂ ಆದರೆ ನಮಗೇನು? ನನಗೆ ಬೇಕಿರುವುದು ರಾಜ್ಯದ ಅಭಿವೃದ್ಧಿ’ ಎಂದರು.

ADVERTISEMENT

‘ತೆರಿಗೆ ಹಣ ಲೂಟಿಯಾಗುತ್ತಿದೆ. ಹೆಲಿಕಾಪ್ಟರ್‌ನಲ್ಲಿ ಓಡಾಡಲು ₹47 ಕೋಟಿ ಖರ್ಚು ಮಾಡಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲದಿದ್ದರೂ ರಸ್ತೆ ಮೂಲಕವೇ ಬಾಳೆಹೊನ್ನೂರಿಗೆ ಬಂದಿದ್ದೇನೆ. ಹೆಲಿಕಾಪ್ಟರ್‌ನಲ್ಲಿ ಓಡಾಡುವುದು ತಪ್ಪು ಎಂದಲ್ಲ. ಮೈಸೂರಿನಿಂದ ಚಾಮರಾಜನಗರಕ್ಕೆ ಅರ್ಧ ಗಂಟೆಯ ಪ್ರಯಾಣ. ಅಲ್ಲಿಗೂ ಹೆಲಿಕಾಪ್ಟರ್‌ನಲ್ಲಿ ತೆರಳುವುದು ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.