
ಚಿಕ್ಕಮಗಳೂರು: ಭಾಷೆ ಒಂದು ಭಾವ ಶಕ್ತಿ. ಅದನ್ನು ಅಭಿವ್ಯಕ್ತಿ ಮಾಡಿ ಲೋಕಕ್ಕೆ ಪರಿಚಯಿಸುವ ಕೆಲಸವನ್ನು ಬರಹಗಾರರು ಮಾಡುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಐಐಪಿ ಪ್ರಕಾಶನ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವಿಕಾಸ ರಂಗದ ವತಿಯಿಂದ ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಹಿತಿ ಕುಂದೂರು ಅಶೋಕ್ ಅವರು ಬರೆದಿರುವ ‘ಪಾಳೆಯಪಟ್ಟು’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಂದೂರು ಅಶೋಕ್ ಅವರ ಈ ಕಾದಂಬರಿ ಐತಿಹಾಸಿಕ ವಿಷಯವೊಂದರ ಸಾಂಸ್ಕೃತಿಕ ಕಥನ. ಐತಿಹಾಸಿಕ ಘಟನೆಗಳನ್ನು ವಸ್ತು ವೈವಿಧ್ಯತೆಯ ಹಿನ್ನೆಲೆಯಲ್ಲಿ ಪರಿಕಲ್ಪನಾತ್ಮಕವಾಗಿ ವಿಸ್ತೃತಗೊಳಿಸಿ ಕಲಾರೂಪ ನೀಡಿದ್ದಾರೆ. ಆದ್ದರಿಂದ ಇದನ್ನು ಐತಿಹಾಸಿಕ ದಾಖಲು ಎಂದು ಓದದೆ ಕಲಾಕೃತಿಯಾಗಿ ಓದಬೇಕಿದೆ ಎಂದರು.
ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ‘ಸಂಘಟನಾ ಚತುರ ಕುಂದೂರು ಅಶೋಕ್ ಅವರು ಇತ್ತೀಚೆಗೆ ಸಾಹಿತ್ಯ ಕ್ಷೇತ್ರದ ಬರವಣಿಗೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಶತಮಾನಗಳ ಹಿಂದಿನ ಗ್ರಾಮೀಣ ವಾತಾವರಣವನ್ನು ಹಾಗೂ ದೇಸಿ ಸಂಸ್ಕೃತಿಯನ್ನು ಕೃತಿಯುದ್ದಕ್ಕೂ ಕಾವ್ಯಾತ್ಮಕ ಶೈಲಿಯಲ್ಲಿ ನಿರೂಪಿಸಿದ್ದಾರೆ’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಕುಂದೂರು ಅಶೋಕ್, ಪುಸ್ತಕ ಹಾಗೂ ಅಕ್ಷರ ಸಂಸ್ಕೃತಿಯನ್ನು ಜನಮಾನಸಕ್ಕೆ ತಲುಪಿಸಿದರೆ ಸಮ ಸಮಾಜ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಐಐಪಿ ಪ್ರಕಾಶನದ ವ್ಯವಸ್ಥಾಪಕ ನಂಜೇಶ್ ಬೆಣ್ಣೂರು, ‘ತಮ್ಮ ಸಂಸ್ಥೆಯಿಂದ ಈವರೆಗೂ ಮೂರು ಸಾವಿರ ಪುಸ್ತಕ ಪ್ರಕಟಿಸಲಾಗಿದೆ. ಪುಸ್ತಕ ಸಂಸ್ಕೃತಿಯನ್ನು ನಿರಂತರವಾಗಿ ಹರಡುವ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ತರೀಕೆರೆಯ ಲೇಖಕ ಮನಸುಳಿ ಮೋಹನ್ ಅವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಗದೀಶ್ ಮರಾಬೈಲ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಾಂಗ್ರೆಸ್ ಮುಖಂಡ ಎಂ.ಪಿ.ಕುಮಾರಸ್ವಾಮಿ, ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ, ಮಹೇಶ್ ಹಾದಿಹಳ್ಳಿ, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.