ಮೂಡಿಗೆರೆ: ತಾಲ್ಲೂಕಿನ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಳ್ಳಿ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ.
ಕುನ್ನಹಳ್ಳಿ ಗ್ರಾಮದ ಕೃಷಿಕ ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಶಿವಾನಂದ ಅವರ ಭತ್ತದ ಗದ್ದೆಯಲ್ಲಿ ಸೋಮವಾರ ಹಸುವಿನ ಕಳೇಬರ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುಸಂಗೋಪನಾ ಇಲಾಖೆ ವೈದ್ಯರ ಪರಿಶೀಲಿಸಿ ಹುಲಿ ದಾಳಿಯಿಂದ ಹಸು ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.
ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ಕ್ಯಾಮೆರಾ ಅಳವಡಿಸಲಾಗಿದ್ದು, ಹುಲಿಯ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ. ಮೂಡಿಗೆರೆ ಆರ್ ಎಫ್‌ಒ ಕಾವ್ಯಾ, ಸಹಾಯಕ ಆರ್‌ಎಫ್‌ಒ ಅಶ್ವತ್ಥ್, ಬೀಟ್ ಫಾರೆಸ್ಟ್ ಸುಮಂತ್, ಶಿವಶಂಕರ್, ಗ್ರಾಮದ ಮುಖಂಡ ರವಿ ಕುನ್ನಹಳ್ಳಿ ಮತ್ತಿತರರು ಇದ್ದರು.
ʼಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕುನ್ನಳ್ಳಿಯಲ್ಲಿ ಹುಲಿದಾಳಿಗೆ ಹಸು ಬಲಿಯಾಗಿರುವ ಘಟನೆಯು ಈ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಭಾಗ ಜನವಸತಿ ಪ್ರದೇಶವಾಗಿದ್ದು, ಕೃಷಿಕರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ತೋಟದ ಮಾಲೀಕರು, ಕಾರ್ಮಿಕರು ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ತಕ್ಷಣ ಹುಲಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದು, ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.