ADVERTISEMENT

ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಮಂಗನ ಕಾಯಿಲೆ ಕುರಿತು ಜಾಗೃತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 8:18 IST
Last Updated 30 ಜನವರಿ 2026, 8:18 IST
ಬಾಳೆಹೊನ್ನೂರು ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಫಾ ಆಯಿಲ್ ವಿತರಿಸಲಾಯಿತು
ಬಾಳೆಹೊನ್ನೂರು ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಫಾ ಆಯಿಲ್ ವಿತರಿಸಲಾಯಿತು   

ಬಾಳೆಹೊನ್ನೂರು: ಮಂಗನ ಕಾಯಿಲೆ (ಕೆಎಫ್‌ಡಿ) ಒಂದು ಸಾಂಕ್ರಾಮಿಕ ವೈರಸ್ ಸೋಂಕು ಆಗಿದ್ದು, ಸೋಂಕಿತ ಉಣುಗು (ಟಿಕ್) ಕಚ್ಚುವುದರಿಂದ ಮನುಷ್ಯರಿಗೆ ಹರಡುತ್ತದೆ. ಆದರೆ, ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಹೇಂದ್ರ ಕಿರಿಟಿ ತಿಳಿಸಿದರು.

ಕರ್ಕೇಶ್ವರ ಗ್ರಾಮ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನರಸಿಂಹರಾಜಪುರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ, ಕರ್ಕೇಶ್ವರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮತ್ತು ಕಾರ್ಮಿಕರಿಗೆ ಮಂಗನ ಕಾಯಿಲೆಯ ಕುರಿತು ಮಾಹಿತಿ ಹಾಗೂ ಡೆಫಾ ಆಯಿಲ್ (ಉಣ್ಣೆ ನಿಷ್ಕರ್ಷಕ ತೈಲ) ವಿತರಿಸಿ ಅವರು ಮಾತನಾಡಿದರು.

ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ಮೈ–ಕೈ ಗಂಟುಗಳಲ್ಲಿ ನೋವು, ಒಸಡಿನಲ್ಲಿ ರಕ್ತಸ್ರಾವ, ಮಲದಲ್ಲಿ ರಕ್ತ ಹೋಗುವುದು, ಕಪ್ಪು ಮಲ ವಿಸರ್ಜನೆ ಈ ಕಾಯಿಲೆಯ ಪ್ರಮುಖ ಲಕ್ಷಣಗಳು. ಈ ರೀತಿ ಲಕ್ಷಣಗಳು ಕಂಡು ಬಂದ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರಕ್ತ ತಪಾಸಣೆ ಮಾಡಿಸುವುದರಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು. ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ, ಲಕ್ಷಣ ಆಧಾರಿತ ಚಿಕಿತ್ಸೆ ನೀಡುತ್ತೇವೆ. ಕಾಯಿಲೆ ತೀವ್ರ ಸ್ವರೂಪಕ್ಕೆ ಹೋಗುವವರೆಗೆ ಕಾಯದೆ ತಕ್ಷಣ ಸಮೀಪದ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡರೆ, ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆಗೆ ಮಣಿಪಾಲದ ಕೆಎಂಸಿ, ಮೆಗನ್ ಆಸ್ಪತ್ರೆಯಲ್ಲಿ ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು. 

ADVERTISEMENT

ಕಾಡಿನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡವರು ಕಾಡಿಗೆ ಹೋಗುವ ಮುಂಚೆ ಮೈತುಂಬ ಬಟ್ಟೆ ಧರಿಸಿ, ಡೆಪಾ ಆಯಿಲ್ ಮುಖಕ್ಕೆ ಹೊರತುಪಡಿಸಿ ಕೈ–ಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಮರಳಿ ಬಂದ ನಂತರ ತಮ್ಮ ಬಟ್ಟೆಗಳನ್ನ ಬಿಸಿ ನೀರಿನಲ್ಲಿ ಸೋಂಕು ನಿವಾರಕಗಳನ್ನ ಬಳಸಿ ಚೆನ್ನಾಗಿ ತೊಳೆಯಬೇಕು. ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು.ದನ–ಕರು ಇತರೆ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದ್ದರೆ, ಅದರ ಮೇಲೆ ಉಣ್ಣೆಗಳು ಕಂಡುಬಂದಲ್ಲಿ ಸಮೀಪದ ಪಶು ಆಸ್ಪತ್ರೆಯಲ್ಲಿ ಉಣ್ಣೆ ನಿಯಂತ್ರಣ ಔಷಧಿಯ ಮೂಲಕ ಉಣುಗುಗಳನ್ನು ನಿವಾರಣೆಗೊಳಿಸಬೇಕು ಎಂದು ಅವರು ತಿಳಿಸಿದರು. 

ಯಾವುದೇ ಮಂಗ ಸತ್ತರೆ ಅದನ್ನ ಮುಟ್ಟದೆ ಕೂಡಲೇ ಸಮೀಪದ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸತ್ತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿ, ಯಾವುದರಿಂದ ಸತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರದಲ್ಲಿ ಮಂಗದ ಕಳೆಬರಹವನ್ನು ನಿಯಮಾನುಸಾರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಮಹೇಂದ್ರ ಕಿರಿಟಿ ಹೇಳಿದರು.

ವೈದ್ಯಾಧಿಕಾರಿ ಡಾ. ಅಭ್ಯುದಯ ಮಾತನಾಡಿ, ‘ಕರ್ಕೇಶ್ವರ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಕಂಡುಬಂದಿದ್ದು, ಗ್ರಾಮಸ್ಥರು–ಕಾರ್ಮಿಕರು ಕಾಡಿಗೆ ಹೋಗುವ ಸಂದರ್ಭದಲ್ಲಿ ಅಥವಾ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ಸೋಂಕಿತ ಉಣುಗು ಕಚ್ಚುವುದರಿಂದ ಈ ಕಾಯಿಲೆ ಬರುತ್ತದೆ. ಈ ಹಿನ್ನೆಲೆ ಎಲ್ಲರೂ ಡೆಫಾ ಆಯಿಲ್ ಅನ್ನು ಬಳಸಿ ಹಾಗೂ ಮೈತುಂಬ ಬಟ್ಟೆ ಧರಿಸಿ ಕಾಡಿಗೆ ಹೋಗಬೇಕಾಗಿ’ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ರಾಜೇಶ್, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಭಗವಾನ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ದಿವ್ಯ, ತಾಲ್ಲೂಕು ಕೆ.ಡಿ.ಪಿ ಸದಸ್ಯ ಶಶಿಕುಮಾರ್, ತಾಲ್ಲೂಕು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಆಕರ್ಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ, ತಾಲ್ಲೂಕು ವ್ಯವಸ್ಥಾಪಕ ಕಿರಣ್, ಪರಶುರಾಮ್, ಸುಮಿತ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.