ಅಜ್ಜಂಪುರ: ತಾಲ್ಲೂಕಿನ ಗಡೀಹಳ್ಳಿ ಗ್ರಾಮದಲ್ಲಿ ಗುರುವಾರ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಂಭ್ರಮದ ನಡುವೆ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷ್ಮೀರಂಗನಾಥ ಸ್ವಾಮಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂರ್ತಿಯನ್ನು ಡೊಳ್ಳು, ವೀರಗಾಸೆ, ಮಂಗಳವಾಧ್ಯ, ಕಹಳೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮಾವು, ಕದಳಿ, ವಿವಿಧ ವರ್ಣದ ಬಟ್ಟೆಯಿಂದ ಶೃಂಗಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಗ್ರಾಮ ಮತ್ತು ಸುತ್ತಮುತ್ತಲ ಸಾವಿರಾರು ಭಕ್ತರು ರಥ ಎಳೆದರು. ಕೆಲವರು ರಥದ ಕಳಸದತ್ತ, ಪುರಿ, ನಿಂಬೆ ಹಣ್ಣು, ಬಾಳೆ ಹಣ್ಣು ತೂರಿ ಸಂಭ್ರಮಿಸಿದರು. ಜೈಕಾರ ಹಾಕಿ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಹೂ-ಹಣ್ಣು ನೀಡಿ, ಭಕ್ತಿ ಸಮರ್ಪಿಸಿದರು.
ರೈತರು, ರಥ ಸುತ್ತ ಪಾನಕದ ಬಂಡಿ ಪ್ರದಕ್ಷಿಣೆ ಹಾಕಿಸಿ, ಸಂತಸ ಪಟ್ಟರು. ಸೊಲ್ಲಾಪುರದ ಗುರುಸಿದ್ದರಾಮೇಶ್ವರ ಸ್ವಾಮಿಗೆ ಹೂವಿನ ಉತ್ಸವ ನಡೆಸಿ, ಬೀಳ್ಕೊಡಲಾಯಿತು. ನೌಕರ ಬಳಗದವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಜಾತ್ರೆ ಹಿನ್ನೆಲೆ ದೇವಾಲಯದಲ್ಲಿ ಸುದರ್ಶನ ಹೋಮ ನಡೆಯಿತು. ಗುಳ್ಳಮ್ಮ ದೇವಿ ಕೆಂಡದಾರ್ಚನೆ ಜರುಗಿತು. ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ ಸಮಿತಿ ಕಾರ್ಯಕ್ರಮ ನಡೆಸಿಕೊಟ್ಟಿತು. ಇಂದು ಒಕಳಿ ಹಾಗೂ ತೀರ್ಥಸ್ನಾನ, ಕೆಂಚರಾಯ ಸ್ವಾಮಿಗೆ ಮರಿಸೇವೆ
ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.