ADVERTISEMENT

ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ; ರೈತರಿಗೆ ನೆಮ್ಮದಿ: ಡಿ.ಎನ್.ಜೀವರಾಜ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 4:35 IST
Last Updated 28 ಆಗಸ್ಟ್ 2022, 4:35 IST
ಡಿ.ಎನ್.ಜೀವರಾಜ್
ಡಿ.ಎನ್.ಜೀವರಾಜ್   

ಕೊಪ್ಪ: ‘ಸರ್ಕಾರ ಭೂ ಕಬಳಿಕೆ ನಿಷೇಧ ಕಾಯ್ದೆ 192(ಎ)ಗೆ ತಿದ್ದುಪಡಿ ಮಾಡಿ ಮಲೆನಾಡಿನ ರೈತರಿಗೆ ವಿನಾಯಿತಿ ನೀಡಿದೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘2006ರಲ್ಲಿ ಕಾಯ್ದೆ ಜಾರಿಗೆ ಬಂದಾಗ ನಾನು, ವಿಶ್ವೇಶ್ವರ ಹೆಗಡೆ ಕಾಗೇರಿ, ಆರಗ ಜ್ಞಾನೇಂದ್ರ ವಿರೋಧಿಸಿದ್ದೆವು. ನಗರ ಪ್ರದೇಶಕ್ಕೆ ಸೀಮಿತವಾಗಬೇಕಿದ್ದ ಆ ಕಾಯ್ದೆಯನ್ನು ಅಧಿಕಾರಿಗಳು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮಾಡಿದ್ದರು. ಪರಿಣಾಮವಾಗಿ ಸಾಕಷ್ಟು ಮಂದಿ ರೈತರು ಕೇಸು ಎದುರಿಸುವಂತಾಯಿತು’ ಎಂದರು.

‘ಕಾಯ್ದೆಗೆ ತಿದ್ದುಪಡಿ ಬಗ್ಗೆ ಕಂದಾಯ ಸಚಿವ ಆರ್.ಅಶೋಕ ಅವರು ಕೊಪ್ಪಕ್ಕೆ ಬಂದಾಗ ಭರವಸೆ ನೀಡಿದ್ದರು. ಇಂದಿನ ಗೃಹ ಸಚಿವ ಜ್ಞಾನೇಂದ್ರ, ಸಿ.ಟಿ.ರವಿ, ಕುಮಾರಸ್ವಾಮಿ, ಪ್ರಾಣೇಶ್, ಹಾಲಪ್ಪ, ಬೋಪಯ್ಯ, ರಂಜನ್ ಹೆಚ್ಚು ಶ್ರಮ ಹಾಕಿದ್ದಾರೆ’ ಎಂದರು.

ADVERTISEMENT

‘ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ರದ್ದು ಪಡಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ನಾಲ್ಕು ಚಕ್ರದ ವಾಹನ ಹೊಂದಿರುವವರ ಕಾರ್ಡ್ ರದ್ದುಪಡಿಸುವಂತೆಯೂ ಆದೇಶವಾಗಿತ್ತು. ಇದರಿಂದ ಕಾರ್ಮಿಕ ವರ್ಗಕ್ಕೆ ತೊಂದರೆಯಾಗಿತ್ತು. ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದೆ. ಇದೀಗ ಆದೇಶವನ್ನು ರದ್ಧುಪಡಿಸಿದ್ದಾರೆ’ ಎಂದು ತಿಳಿಸಿದರು.

ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್, ಎನ್.ಆರ್.ಪುರ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ಡಾ. ಜಿ.ಎಸ್.ಮಹಾಬಲ, ಎಚ್.ಕೆ.ದಿನೇಶ್ ಹೊಸೂರು, ಶ್ರೀನಿವಾಸ್, ಕೃಷ್ಣಮೂರ್ತಿ, ನೂತನ್ ಕುಮಾರ್, ನವೀನ್ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.