ADVERTISEMENT

ಅಕ್ರಮ ಭೂಮಂಜೂರಾತಿ: ಭೂಕಬಳಿಕೆ ನ್ಯಾಯಾಲಯ ಮಧ್ಯ ಪ್ರವೇಶ

ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ: ವಿವರ ಒದಗಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ

ವಿಜಯಕುಮಾರ್ ಎಸ್.ಕೆ.
Published 17 ನವೆಂಬರ್ 2023, 5:43 IST
Last Updated 17 ನವೆಂಬರ್ 2023, 5:43 IST
<div class="paragraphs"><p>ನ್ಯಾಯಾಲಯ ಆದೇಶ (ಪ್ರಾತಿನಿಧಿಕ ಚಿತ್ರ)</p></div>

ನ್ಯಾಯಾಲಯ ಆದೇಶ (ಪ್ರಾತಿನಿಧಿಕ ಚಿತ್ರ)

   

ಚಿಕ್ಕಮಗಳೂರು: ಸರ್ಕಾರಿ ಜಾಗ ಅಕ್ರಮವಾಗಿ ಮಂಜೂರು ಮಾಡಿರುವ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. 13 ತಹಶೀಲ್ದಾರ್‌ಗಳು ನಡೆಸಿರುವ ತನಿಖೆ ವರದಿ ಸರ್ಕಾರದ ಮುಂದಿದ್ದು, ಅದನ್ನು ಪಡೆದು ವಿಚಾರಣೆ ನಡೆಸಲು ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮುಂದಾಗಿದೆ.

ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

ADVERTISEMENT

ಕಡೂರು ತಾಲ್ಲೂಕಿನಲ್ಲಿ 2,700 ಎಕರೆ, ಮೂಡಿಗೆರೆ ತಾಲ್ಲೂಕಿನಲ್ಲಿ 3,800 ಎಕರೆ ಸೇರಿ ಒಟ್ಟು 6,500 ಎಕರೆ ಭೂಕಬಳಿಕೆ ಆಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳನ್ನು ಆಧರಿಸಿ ವಿಚಾರಣೆ ನಡೆಸಲು ಈ ಪ್ರಕರಣ ಯೋಗ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸರ್ಕಾರಿ ಜಮೀನು ಅತಿಕ್ರಮಣ ಮಾಡಿದ ವ್ಯಕ್ತಿಗಳ ಹೆಸರು, ವಿಳಾಸ, ಅತಿಕ್ರಮಣ ಮಾಡಿದ ಜಮೀನಿನ ವಿಸ್ತೀರ್ಣ, ಸರ್ವೆ ನಕಾಶೆಗಳನ್ನು ಒಳಗೊಂಡ ವಿವರವಾದ ವರದಿಯನ್ನು ನ.23ರೊಳಗೆ ದಾಖಲೆಗಳ ಸಹಿತ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ಎರಡೂ ತಾಲ್ಲೂಕಿನ ತಹಶೀಲ್ದಾರ್‌ಗಳು ನ್ಯಾಯಾಲಯಕ್ಕೆ ಹಾಜರಾಗಿ ಮಾಹಿತಿ ನೀಡುವ ಸಾದ್ಯತೆ ಇದೆ.

ಈ ಎರಡೂ ತಾಲ್ಲೂಕಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರಾತಿ ಆಗಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ರಾಜ್ಯ ಸರ್ಕಾರ 15 ತಹಶೀಲ್ದಾರ್‌ಗಳ ತಂಡ ರಚಿಸಿತ್ತು. ಈ ಪೈಕಿ 13 ತಹಶೀಲ್ದಾರ್‌ಗಳು ಜಿಲ್ಲೆಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಒಂದು ತಿಂಗಳು ಕಾಲ ಕಡತಗಳನ್ನು ಜಾಲಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ಈ ವರದಿ ಪ್ರಕಾರ 6,500ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರೇ ಮಾಧ್ಯಮಗಳಿಗೆ ವಿವರಿಸಿದ್ದರು.

ಮೂಡಿಗೆರೆ ತಾಲ್ಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಡತಗಳನ್ನು ಪರಿಶೀಲಿಸಿದ್ದ ತಂಡ, ಈ ಪೈಕಿ 1,300ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಕ್ರಮವಾಗಿದೆ ಎಂಬುದನ್ನು ಪತ್ತೆ ಹಚ್ಚಿತ್ತು. ಕಡೂರು ತಾಲ್ಲೂಕಿನಲ್ಲಿ 2,200ಕ್ಕೂ ಕಡತ ಪರಿಶೀಲಿಸಿದ್ದು, ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸರ್ಕಾರಿ ಜಾಗ ಅನರ್ಹರಿಗೆ ಮಂಜೂರಾಗಿದೆ ಎಂಬ ವಿವರವನ್ನು ತನಿಖಾ ತಂಡ ನೀಡಿತ್ತು.

ನಮೂನೆ 53, 57ರ ಅಡಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಕಂದಾಯ ಕಾಯ್ದೆ ಪಾಲಿಸಿಲ್ಲ. ಅರ್ಜಿದಾರರ ಕುಟುಂಬದ ಹೆಸರಿನಲ್ಲಿ ಈಗಾಗಲೇ ಜಮೀನಿದೆಯೇ ಎಂಬುದನ್ನು ಪರಿಶೀಲಿಸಿಲ್ಲ. 2002ಕ್ಕೂ ಮುಂಚೆಯಿಂದ ಸಾಗುವಳಿ ಮಾಡುತ್ತಿದ್ದಾರೆಯೇ, ಇಲ್ಲವೊ ಎಂಬುದನ್ನೂ ಗಮನಿಸಿಲ್ಲ. ಕೆಲವು ಪ್ರಕರಣಗಳಲ್ಲಿ ಭೂಮಂಜೂರಾತಿಗೆ ಸಂಬಂಧಿಸಿದ ಕಡತಗಳೇ ಇಲ್ಲ ಎಂಬುದು ತನಿಖೆ ವೇಳೆ ಬಯಲಾಗಿತ್ತು.

ಈ ಪ್ರಕರಣದಲ್ಲಿ ಕಡೂರು ತಹಶೀಲ್ದಾರ್ ಆಗಿದ್ದ ತಹಶೀಲ್ದಾರ್ ಜೆ.ಉಮೇಶ್‌ ಬಂಧನ ಕೂಡ ಆಗಿತ್ತು. ಮೂಡಿಗೆರೆ ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಇಬ್ಬರು ಸಿಬ್ಬಂದಿಯ ಬಂಧನವೂ ಆಗಿತ್ತು.

‘ತನಿಖೆ ಪೂರ್ಣಗೊಳಿಸಿದ್ದ ತಹಶೀಲ್ದಾರ್‌ಗಳ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ತಿಂಗಳು ಕಳೆದಿವೆ. ತನಿಖೆ ನಿಲ್ಲಿಸುವಂತೆ ಸರ್ಕಾರದ ಮೇಲೆ ಒತ್ತಡವೂ ಹೆಚ್ಚಾಗಿತ್ತು. ವರದಿ ಪಡೆದು ಸುಮ್ಮನಾಗಿದ್ದ ಸರ್ಕಾರ ಈಗ ಭೂಕಬಳಿಕ ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿ ನೀಡುವುದು ಅನಿವಾರ್ಯ. ಈ ಪ್ರಕರಣದಲ್ಲಿ ಭಾಗಿ ಆಗಿರುವವರು ಇನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ’ ಎಂಬುದು ಕಾನೂನು ತಜ್ಞರು ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.