
ಚಿಕ್ಕಮಗಳೂರು: ಭೂ ಒಡೆತನ ಯೋಜನೆಯಡಿ ಭೋವಿ ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ನಿಗಮದಿಂದ ₹20 ಲಕ್ಷ ಸಹಾಯಧನ ನೀಡಲಾಗುವುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫಲಾನುಭವಿ ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಜಮೀನು ಖರೀದಿಸಿ ಭೋವಿ ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಮಾಲೀಕರನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶ’ ಎಂದರು.
ಜಿಲ್ಲೆಯಲ್ಲಿ ಭೋವಿ ಸಮುದಾಯದ ಜನಸಂಖ್ಯೆ 33 ಸಾವಿರ ಇದೆ. ಭೂ ಒಡೆತನ ಯೋಜನೆಗೆ ಜಿಲ್ಲೆಯಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿದೆ. ಎಲ್ಲಾ 8 ಯೋಜನೆಗಳ ಬಗ್ಗೆ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಕುರಿ, ಮೇಕೆ ಸಾಕಾಣಿಕೆ ಯೋಜನೆಯಡಿ 10 ಕುರಿ 1 ಟಗರು ಖರೀದಿಸಲು ₹1 ಲಕ್ಷ ಸಹಾಯಧನ ಪಡೆಯುವ ಅವಕಾಶವಿದೆ. ಸಮುದಾಯದ ಜನ ಇದರ ಉಪಯೋಗ ಪಡೆದುಕೊಳ್ಳಬೇಕು. ಹೈನುಗಾರಿಕೆ ಮಾಡುವವರಿಗೆ 2 ಹಸು ನೀಡಲಾಗುವುದು ಎಂದು ವಿವರಿಸಿದರು.
ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಯಂ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ₹4 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ಸೆಟ್ ಆಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ₹3.75 ಲಕ್ಷ ನೀಡಲಾಗುವುದು ಎಂದು ತಿಳಿಸಿದರು.
ಕಿರುಸಾಲ ಯೋಜನೆಯಡಿ 10 ಜನ ಮಹಿಳಾ ಸದಸ್ಯರು ಸಂಘ ನೋಂದಾಯಿಸಿಕೊಂಡಿದ್ದರೆ ಅಂತಹ ಮಹಿಳಾ ಸಂಘದ ಸದಸ್ಯರಿಗೆ ₹5 ಲಕ್ಷ ಸಹಾಯಧನ ಸಹಿತ ಸಾಲ ನೀಡಲಾಗುವುದು. ಈ ಆರ್ಥಿಕ ನೆರವನ್ನು ಆವರು ಬಳಸಿಕೊಂಡು ಸ್ವಂತ ಉದ್ಯೋಗ ಮಾಡಬಹುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ಮಾಲತಿ, ನಿಗಮದ ಅಧಿಕಾರಿ ಮನೀಶ್ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.