ADVERTISEMENT

131 ಕಂದಾಯ ಗ್ರಾಮ, ಉಪಗ್ರಾಮಗಳ ರಚನೆ: ಕೆ.ಎಸ್‌.ಆನಂದ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 3:08 IST
Last Updated 24 ನವೆಂಬರ್ 2025, 3:08 IST
ಕಡೂರು ಪಟ್ಟಣದ 5ನೇ ವಾರ್ಡ್‌ನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಭಾನುವಾರ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಸ್‌.ಆನಂದ್‌ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್‌, ಕೆ.ಎಂ.ಮೋಹನ ಕುಮಾರ್‌, ಎಂ.ಎಚ್‌.ಚಂದ್ರಪ್ಪ, ದಾನಿ ಉಮೇಶ್‌, ದೊಣ್ಣೆಕೋರನಹಳ್ಳಿ ಉಮೇಶ್‌ ಮತ್ತಿತರರು ಇದ್ದರು. 
ಕಡೂರು ಪಟ್ಟಣದ 5ನೇ ವಾರ್ಡ್‌ನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಭಾನುವಾರ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಸ್‌.ಆನಂದ್‌ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್‌, ಕೆ.ಎಂ.ಮೋಹನ ಕುಮಾರ್‌, ಎಂ.ಎಚ್‌.ಚಂದ್ರಪ್ಪ, ದಾನಿ ಉಮೇಶ್‌, ದೊಣ್ಣೆಕೋರನಹಳ್ಳಿ ಉಮೇಶ್‌ ಮತ್ತಿತರರು ಇದ್ದರು.    

ಕಡೂರು: ಕಳೆದ 50 ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೇವಲ 20 ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಯಾಗಿದ್ದು, ತಮ್ಮ ಎರಡೂವರೆ ವರ್ಷದ ಅವಧಿಯಲ್ಲಿ 131 ಕಂದಾಯ ಗ್ರಾಮ, ಉಪಗ್ರಾಮಗಳ ರಚನೆಯಾಗಿದೆ. ಇದರ ಶ್ರೇಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಸಲ್ಲಬೇಕು ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ಪಟ್ಟಣದ 5ನೇ ವಾರ್ಡ್‌ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಭಾನುವಾರ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದ ಸುತ್ತ ಲೇಔಟ್‌ ಸಂಸ್ಕೃತಿ ಹೆಚ್ಚಿ ಹಲವಾರು ಬಡಾವಣೆಗಳು ತಲೆ ಎತ್ತಿದ್ದರೂ ಮೂಲ ಸೌಕರ್ಯಗಳ ಕೊರತೆ ಇದೆ.  ಹತ್ತಾರು ವರ್ಷಗಳ ಹಿಂದೆ ಭೂ ಮಾಲೀಕರು ತಮ್ಮ ಜಮೀನುಗಳನ್ನು ಅವಶ್ಯಕತೆಗೆ ತಕ್ಕಂತೆ ಗುಂಟೆಗಳ ಲೆಕ್ಕದಲ್ಲಿ ಮಾರಾಟ ಮಾಡಿದ್ದು, ಇದರಿಂದ ಗುಂಟೆ ಲೆಕ್ಕದಲ್ಲಿ ಭೂಮಿ ಖರೀದಿಸಿ ಮನೆ ನಿರ್ಮಿಸಲು ಮುಂದಾದವರು ತಾಂತ್ರಿಕ ಸಮಸ್ಯೆಗೆ ಸಿಲುಕಿ ಪಂಚಾಯಿತಿ ಲೆಕ್ಕವೂ ಇಲ್ಲ, ಪುರಸಭೆಯ ಖಾತೆಯೂ ಇಲ್ಲ ಎನ್ನುವ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರವು ಲೇಔಟ್‌ ನಿರ್ಮಾಣದ ಸಂದರ್ಭದಲ್ಲಿ ರಸ್ತೆ, ಚರಂಡಿ, ವಿದ್ಯುತ್‌, ನೀರಿನ ಸಂಪರ್ಕ ಒದಗಿಸಿಯೇ ನಿವೇಶನ ಮಾರಾಟಕ್ಕೆ ಮುಂದಾಗಬೇಕು ಎಂದು ಮಾರ್ಗಸೂಚಿ ಹೊರಡಿಸುವುದರ ಜತೆಗೆ, ಗುಂಟೆ ಲೆಕ್ಕದಲ್ಲಿ ಬಿಡಿ ಜಮೀನು ಮಾರಾಟಕ್ಕೆ ಕಡಿವಾಣ ಹಾಕಿದೆ. 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿ ನೋಂದಣಿಯಾಗದಂತೆ ಕಾನೂನು ರೂಪಿಸಿದೆ. ಸದ್ಯ ಗುಂಟೆ ಲೆಕ್ಕದಲ್ಲಿ ಭೂಮಿ ಖರೀದಿಸಿದವರು, ಶುಲ್ಕ ಪಾವತಿಸಿ ಬಿʼಖಾತಾ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ರಸ್ತೆ ಸಾರ್ವಜನಿಕರ ಆಸ್ತಿಯಾಗಿರುತ್ತದೆ. ಅವುಗಳ ರಕ್ಷಣೆಯ ಹೊಣೆಗಾರಿಕೆಯು ಜನರ ಮೇಲೂ ಇರುತ್ತದೆ. ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ರೈತರು ನೀರಿನ ಪೈಪ್‌ ಅಳವಡಿಸುವ ಸಲುವಾಗಿ ಬಡಾವಣೆ ರಸ್ತೆಗಳನ್ನು ಹೊಸದಾಗಿ ಮನೆ ನಿರ್ಮಿಸುವವರು ಶೌಚದ ಗುಂಡಿಗಾಗಿ ಬಗೆಯುವ ಸ್ಥಿತಿ ಇದೆ. ತಮ್ಮ ಕೆಲಸ ಮುಗಿದ ಬಳಿಕ ಅದನ್ನು ಮೊದಲಿದ್ದ ಹಾಗೆಯೇ ಸರಿ ಪಡಿಸುವ ಜವಾಬ್ದಾರಿಯನ್ನು ಹೊತ್ತರೆ ಮಾಡಿದ ಕೆಲಸ ಸಾರ್ಥಕವಾಗುತ್ತದೆ. ಇಲ್ಲವಾದರೆ ಸಾರ್ವಜನಿಕ ಕೆಲಸ ಮಾಡುವವರ ಉತ್ಸಾಹ ಕುಂದುತ್ತದೆ. ಜನರೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಮುಂದಿನ ದಿನಗಳಲ್ಲಿ ನಿವೇಶನ ಖರೀದಿಸುವವರು ಬಡಾವಣೆಗಳಲ್ಲಿ ಎಲ್ಲ ಮೂಲ ಸೌಕರ್ಯ ಇವೆಯೇ ಎನ್ನುವುದನ್ನು ಮನಗಂಡು ಖರೀದಿಗೆ ಮುಂದಾಗಬೇಕು. ಜತೆಗೆ ಲೇಔಟ್‌ಗಳಲ್ಲಿ ನಿವಾಸಿಗಳ ಸಂಘ ಮಾಡಿಕೊಂಡು ಮೂಲಸೌಕರ್ಯಗಳ ರಕ್ಷಣೆ ಮತ್ತು ನಿರ್ವಹಣೆಗೆ ಒತ್ತು ಕೊಡಬೇಕು ಎಂದು ಕಿವಿಮಾತು ಹೇಳಿದರು.

ಬಡಾವಣೆ ನಿವಾಸಿಗರು ಸ್ಥಳೀಯ ಸಮಸ್ಯೆಗಳ ಕುರಿತು ಗಮನ ಸೆಳೆದರು. ಪುರಸಭೆ ಸದಸ್ಯ ಕೆ.ಎಂ.ಮೋಹನ್‌ಕುಮಾರ್‌, ಮಲ್ಲೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ವಸಂತ್‌ ಕುಮಾರ್‌, ದಾನಿ ಉಮೇಶ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಉಮೇಶ್‌, ನಿವೃತ್ತ ಶಿಕ್ಷಕ ಚಂದ್ರಪ್ಪ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಂ.ಎಚ್‌.ಚಂದ್ರಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಯರದಕೆರೆ ಎಂ.ರಾಜಪ್ಪ, ಸಾಣೇಹಳ್ಳಿ ರೇಣುಕಾರಾಧ್ಯ, ನಾಗರತ್ನಮ್ಮ, ಮಲ್ಲೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾದ ಓಂಕಾರಪ್ಪ, ಧರ್ಮರಾಜ್‌, ಚನ್ನಪ್ಪ, ಮಂಜುನಾಥ್‌, ಸ್ಥಳೀಯ ನಿವಾಸಿಗಳಾದ ಬಸವರಾಜಪ್ಪ, ಕರಿಬಡ್ಡೆ ರಾಜು, ಪ್ರಕಾಶ್‌, ಗಿರೀಶ್‌, ಸಪ್ತಕೋಟಿ ಧನಂಜಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.