ಶೃಂಗೇರಿ ತಾಲ್ಲೂಕಿನ ಶಿಡ್ಲೆ ಬಳಿ ಕೆಎಸ್‍ಆರ್‍ಟಿಸಿ ಡಿಪೊಗಾಗಿ ಗುರುತಿಸಿದ ಸ್ಥಳ.
ಶೃಂಗೇರಿ: ಸರ್ಕಾರ ವಿಧಿಸಿರುವ ಕಠಿಣ ನಿಯಮದಿಂದಾಗಿ ಬಗರ್‌ಹುಕುಂ ಜಮೀನು ಸಾಗುವಳಿ, ನಮೂನೆ 94ಸಿ ಮತ್ತು 94ಸಿಸಿ ಅಡಿಯಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಲಕ್ಷಾಂತರ ರೈತರು ಹಕ್ಕುಪತ್ರದ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಜಮೀನಿಗೆ ಹಕ್ಕು ನೀಡುವಂತೆ ಕೋರಿದ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ.
ವರ್ಗೀಕೃತ ಸೊಪ್ಪಿನಬೆಟ್ಟ ಕಾನು, ಸರ್ಕಾರಿ ಕಾನು, ಸರ್ಕಾರಿ ಖರಾಬ್, ಜುಮ್ಮಬಾನೆ, ಕುಮ್ಕಿ ಪ್ರದೇಶದಲ್ಲಿ ಭೂ ಮಂಜೂರಾತಿ ಮಾಡದಂತೆ ಸರ್ಕಾರ ನಿರ್ಬಂಧ ವಿಧಿಸಿದೆ. ಗೋಮಾಳ ಪ್ರದೇಶದಲ್ಲಿ ಮಂಜೂರಾತಿಗೆ ಅವಕಾಶ ಇದ್ದರೂ ಷರತ್ತು ವಿಧಿಸಲಾಗಿದೆ. ಅರಣ್ಯ ಮತ್ತು ಕಂದಾಯ ಪ್ರದೇಶದ ಜಂಟಿ ಸರ್ವೆ ಮುನ್ನ ಬಗರ್‌ಹುಕುಂ ಸಾಗುವಳಿ ಅರ್ಜಿ ವಿಲೇವಾರಿಗೆ ಸರ್ಕಾರ ಗಡುವು ನೀಡಿದೆ. ಇನ್ನೊಂದೆಡೆ ವರ್ಗೀಕೃತ ಕಂದಾಯ ಪ್ರದೇಶದಲ್ಲಿ ಭೂ ಮಂಜೂರಾತಿ ಮಾಡದಂತೆ ಆದೇಶಿಸಿದೆ. ನಮೂನೆ 94ಸಿ, 94ಸಿಸಿ, 50, 53, 57ರಲ್ಲಿ ಸಲ್ಲಿಸಿದ ಅರ್ಜಿಗಳು ತಿರಸ್ಕೃತವಾಗಿ ರೈತರ ಮೇಲೆ ಒತ್ತುವರಿ ಪ್ರಕರಣ ದಾಖಲಿಸಿ ಸಾಗುವಳಿ ಪ್ರದೇಶವನ್ನು ವಶಕ್ಕೆ ಪಡೆಯಲು ಅರಣ್ಯ ಮತ್ತು ಕಂದಾಯ ಇಲಾಖೆ ಉತ್ಸಾಹದಲ್ಲಿದೆ.
ವಾಸದ ಮನೆಗೆ 94ಸಿ ಹಕ್ಕುಪತ್ರ ಪಡೆಯಲು ಸಲ್ಲಿಕೆಯಾದ 7,456 ಅರ್ಜಿಗಳ ಪೈಕಿ 61 ಹಕ್ಕುಪತ್ರ ವಿತರಣೆಯಾಗಿದೆ. 6,425 ಅರ್ಜಿಗಳು ತಿರಸ್ಕೃತಗೊಂಡಿದ್ದು, 970 ಅರ್ಜಿಗಳು ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಲು ರವಾನೆಯಾಗಿವೆ. ನಮೂನೆ 50ರಲ್ಲಿ 2,798 ಅರ್ಜಿಗಳು ಸ್ವೀಕೃತವಾಗಿದ್ದು, 105 ಅರ್ಜಿಗಳು ಮಂಜೂರಾಗಿದ್ದು, 2,297 ಅರ್ಜಿಗಳು ತಿರಸ್ಕೃತಗೊಂಡಿವೆ. ನಮೂನೆ 53ರಲ್ಲಿ 3,642 ಅರ್ಜಿಗಳು ಸ್ವೀಕೃತವಾಗಿದ್ದು, 1,313 ಅರ್ಜಿಗಳು ಮಂಜೂರಾಗಿವೆ. 623 ಅರ್ಜಿಗಳು ಬಾಕಿ ಉಳಿದಿದೆ.
ಸ್ಯಾಟ್‍ಲೈಟ್ ಇಮೇಜ್: ಅನಧಿಕೃತ ಸಾಗುವಳಿ ಪ್ರದೇಶದ ಮಹಜರು ಪ್ರಕ್ರಿಯೆಯನ್ನು ಉಪಗ್ರಹ ಆಧಾರಿತ ಮೊಬೈಲ್‍ನಲ್ಲಿ ಗುರುತಿಸುವುದು ಕಡ್ಡಾಯ. ಸ್ಯಾಟ್‍ಲೈಟ್ ಇಮೇಜ್‌ನ ಮೂಲಕ ಸಾಗುವಳಿ ದೃಢೀಕರಿಸಬೇಕಿದೆ. ಸಾಗುವಳಿ ಪ್ರದೇಶದಲ್ಲಿ ಬೆಳೆ ಬದಲಾಯಿಸುವ ರೈತರಿಗೆ ಉಪಗ್ರಹ ಪದ್ಧತಿ ಸಮಸ್ಯೆ ಉಂಟುಮಾಡುತ್ತಿದೆ. ನಷ್ಟದ ಕಾರಣದಿಂದ ಬೆಳೆ ಬದಲಾಯಿಸುವುದು ರೈತರಿಗೆ ಅನಿವಾರ್ಯವಾಗಿದ್ದು, ಸರ್ಕಾರ ಇದನ್ನು ಒಪ್ಪುತ್ತಿಲ್ಲ. ತಂತ್ರಾಂಶ, ಮೊಬೈಲ್ ಆಧರಿತ ಹೊಸ ನಿಯಮಗಳು ಸುಮಾರು 4 ದಶಕದಿಂದ ಸಾಗುವಳಿ ಹಕ್ಕುಪತ್ರಕ್ಕಾಗಿ ಪ್ರಯತ್ನ ಮಾಡುತ್ತಿರುವ ರೈತರನ್ನು ಸಂಕಷ್ಟಕ್ಕೆ ದೂಡಿವೆ ಎನ್ನುತ್ತಾರೆ ಸ್ಥಳೀಯರು.
ಜಮೀನು ವಶ ಅಧಿಕಾರ: ಕರ್ನಾಟಕ ಭೂ ಕಂದಾಯ ಅಧಿನಿಯಮ 1964-94ಬಿ ಮತ್ತು 94ರ ಎ(4)ರಡಿ ಸ್ವೀಕೃತಗೊಂಡ ನಮೂನೆ 94ಸಿ, 94ಸಿಸಿ ಮತ್ತು 50, 53, 57ರಡಿ ಅನರ್ಹ ಅರ್ಜಿ ತಿರಸ್ಕರಿಸಲು ಕರ್ನಾಟಕ ಭೂ ಕಂದಾಯ ಅಧಿನಿಯಮಗಳು 1969ರ ನಿಯಮ 108 ಸಿಸಿ, 108ಸಿಸಿಸಿ ತಿದ್ದುಪಡಿಗೊಳಿಸಿ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಅನರ್ಹ ಎಂದು ಗುರುತಾದ ಅರ್ಜಿಯನ್ನು ತಕ್ಷಣ ತಿರಸ್ಕರಿಸಿ ಆದೇಶ ಹೊರಡಿಸಬೇಕು. ತಿರಸ್ಕೃತ ಅರ್ಜಿಯ ಬಗರ್‌ಹುಕುಂ ಸಾಗುವಳಿ ಪ್ರದೇಶವನ್ನು ವಶಕ್ಕೆ ಪಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಅರ್ಜಿ ಪರಿಶೀಲನೆ ಆರಂಭವಾಗಿದ್ದು, ತಿರಸ್ಕೃತ ಅರ್ಜಿಯ ಬಗರ್‌ಹುಕುಂ ಪ್ರದೇಶ ವಶಕ್ಕೆ ಪಡೆಯುವ ಕಾನೂನು ಪ್ರಕ್ರಿಯೆ ಅಧಿಕೃತಗೊಂಡಿದೆ.
2013ರ ನಂತರ ತಾಲ್ಲೂಕಿನಲ್ಲಿ ನಮೂನೆ 94ಸಿ, 94ಸಿಸಿ ಮತ್ತು 50, 53, 57ರ ಅಡಿಯಲ್ಲಿ ಹಕ್ಕುಪತ್ರ ನೀಡಿಲ್ಲ. 2013ಕ್ಕಿಂತ ಹಿಂದೆ ನೀಡಿದ ಹಕ್ಕುಪತ್ರಗಳಿಗೆ ಪಹಣಿ ನೀಡದೆ ಸೋಪ್ಪಿನ ಬೆಟ್ಟ ಎಂದು ಸಬೂಬು ಹೇಳುತ್ತಿದ್ದಾರೆ. ಸೋಪ್ಪಿನ ಬೆಟ್ಟ ಎಂದು ಬ್ರಿಟಿಷರ ಕಾಲದಿಂದ ಇದೆ. ಇದು ಅಧಿಕಾರಿಗಳ ಹುನ್ನಾರ ಎಂದು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಹೇಳಿದರು.
ಸಮಿತಿ ಅಧಿಕಾರ ಮೊಟಕು
ಬಗರ್‌ಹುಕುಂ ಭೂ ಸಾಗುವಳಿ ಸಕ್ರಮ ಸಮಿತಿ ಸದಸ್ಯ ಕಾರ್ಯದರ್ಶಿ ಹುದ್ದೆಯ ತಹಶೀಲ್ದಾರ್‌ಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಭೂ ಮಂಜೂರಾತಿ ತೀರ್ಮಾನ ಕುರಿತು ಸಮಿತಿಯು ನಿಯಮ ಬಾಹಿರ ಬಹುಮತ ನಿರ್ಣಯ ಕೈಗೊಂಡರೆ ಮಂಜೂರಾತಿ ರದ್ದತಿಗೆ ಉಪವಿಭಾಗಾಧಿಕಾರಿಯಗೆ ಶಿಫಾರಸು ಪತ್ರ ಬರೆಯುವ ಅಧಿಕಾರ ತಹಶೀಲ್ದಾರ್‌ಗೆ ಇದೆ. ಕರ್ನಾಟಕ ಭೂ ಮಂಜೂರಾತಿ 1969 ನಿಯಮ 108ರ ಅನ್ವಯ ಭೂ ಮಂಜೂರಾತಿ ರದ್ದು ಶಿಫಾರಸಿನ ಮಹತ್ವದ ಅಧಿಕಾರವನ್ನು ಸದಸ್ಯ, ಕಾರ್ಯದರ್ಶಿಗೆ ನೀಡಿರುವುದು ಸಮಿತಿಯ ಅಧಿಕಾರ ಮೊಟಕು ಮಾಡಿದಂತಿದೆ ಎಂಬುದು ಮುಖಂಡರ ಆರೋಪ.
ಗೋಮಾಳದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ
ಭೂ ಮಂಜೂರಾತಿ ಕುರಿತಂತೆ ಸರ್ಕಾರ ಅನುಷ್ಠಾನ ಮಾಡಿರುವ ಮಾರ್ಗಸೂಚಿ ನಿಯಮಗಳು ರೈತ ಸ್ನೇಹಿಯಾಗಿ ಇಲ್ಲ. ಗೋಮಾಳ ಪ್ರದೇಶದಲ್ಲಿ ಭೂ ಮಂಜೂರಾತಿಗೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ಹೇರಿರುವ ನಿಬಂಧನೆ ಕಠಿಣವಾಗಿದೆ. ಗ್ರಾಮದ ಎಲ್ಲ ಸರ್ವೆ ನಂಬರ್ ವ್ಯಾಪ್ತಿಯಲ್ಲಿನ ಗೋಮಾಳ ಪ್ರದೇಶವನ್ನು ಗುರುತಿಸಿ 100 ಜಾನುವಾರುಗಳಿಗೆ 30 ಎಕರೆ ಮೀಸಲಿಡುವುದು ಕಡ್ಡಾಯವಾಗಿದೆ. ಹೆಚ್ಚುವರಿ ಗೋಮಾಳ ಪ್ರದೇಶ ಕಂಡು ಬಂದರೆ ಡೀಮ್ಡ್ ಫಾರೇಸ್ಟ್ ಪ್ರದೇಶಕ್ಕೆ ಜೋಡಿಸಿ ಉಳಿದ ಪ್ರದೇಶದಲ್ಲಿ ಭೂ ಮಂಜೂರಾತಿಗೆ ಸರ್ಕಾರ ಅವಕಾಶ ನೀಡಿದೆ. ಜಾನುವಾರು ಗಣತಿ ವರದಿ ಆಧರಿಸಿ ಜಾನುವಾರುಗಳಿಗೆ ಗೋಮಾಳ ಪ್ರದೇಶ ಮೀಸಲಿಡಲಾಗುತ್ತಿದೆ.
ಬಗರ್‌ಹುಕುಂ ಸಾಗುವಳಿ ಪ್ರದೇಶ ಮಂಜೂರಾತಿಗೆ ಸರ್ಕಾರ ಸರಳ ನಿಯಮ ರೂಪಿಸಬೇಕು. ಡೀಮ್ಡ್ ಫಾರೆಸ್ಟ್, ಗೋಮಾಳ, ಮೊಬೈಲ್ ಆ್ಯಪ್ ಕುರಿತ ಆದೇಶದ ಪುನರ್ ಪರಿಶೀಲನೆ ಆಗಬೇಕುಅನಿಲ್ ಹೊಸಕೊಪ್ಪ, ರಾಜ್ಯ ಸಂಚಾಲಕ, ಮಲೆನಾಡು–ಕರಾವಳಿ ಜನಪರ ಒಕ್ಕೂಟ
ಭೂ ಮಂಜೂರಾತಿ ಸಮಸ್ಯೆ ಮಲೆನಾಡಿನಲ್ಲಿ ಹೆಚ್ಚಿದೆ. ಈ ಸಮಸ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿರುವುದರಿಂದ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಬೇಕು. ನಂತರ ನಾವು ಭೂ ಮಂಜೂರಾತಿ ಮಾಡಲು ಸಾಧ್ಯಅನುಪ್ ಸಂಜೋಗ್, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.