ADVERTISEMENT

ಭೂ ಅಕ್ರಮ | 11 ಅಧಿಕಾರಿಗಳಿಗೆ ನೋಟಿಸ್: ಆರೋಪಪಟ್ಟಿಗೆ ಸಿದ್ಧತೆ

ನೋಟಿಸ್ ಜಾರಿ ಮಾಡಿದ ಕಂದಾಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:18 IST
Last Updated 17 ಅಕ್ಟೋಬರ್ 2025, 23:18 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಕೊನೆಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ತನಿಖೆ ಪೂರ್ಣಗೊಳಿಸಿ ಮೂಡಿಗೆರೆ ತಾಲ್ಲೂಕಿನ 11 ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಕಂದಾಯ ಇಲಾಖೆ ಸಿದ್ಧಪಡಿಸಿದೆ.

ಮೂಡಿಗೆರೆ ಮತ್ತು ಕಡೂರು ತಾಲ್ಲೂಕುಗಳಲ್ಲಿ ಅಕ್ರಮ ಭೂ ಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ 13 ತಹಶೀಲ್ದಾರ್‌ಗಳ ತಂಡವನ್ನು ಸರ್ಕಾರ ರಚಿಸಿತ್ತು. ಸರ್ಕಾರಕ್ಕೆ ತಂಡ ವರದಿ ಸಲ್ಲಿಸಿದ್ದು, ಅದರ ಪ್ರಕಾರ 10,598 ಎಕರೆ ಅಕ್ರಮ ಮಂಜೂರಾತಿ ಆಗಿದೆ. 

ADVERTISEMENT

4,204 ಪ್ರಕರಣಗಳ ಒಟ್ಟು 10,598 ಎಕರೆ ಅಕ್ರಮ ಭೂಮಂಜೂರಾತಿಯನ್ನು ಮೂರು ಭಾಗವಾಗಿ ಮಾಡಿಕೊಂಡಿದೆ. 2,225 ಪ್ರಕರಣಗಳ 6,248 ಎಕರೆಯನ್ನು ಅನರ್ಹ ಎಂದು ತನಿಖಾ ತಂಡ ವರದಿ ನೀಡಿತ್ತು. ಇದನ್ನು ಆಧರಿಸಿ ಅಷ್ಟೂ ಭೂಮಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ವಿಚಾರಣೆಯನ್ನು ಇಬ್ಬರು ಉಪವಿಭಾಗಾಧಿಕಾರಿಗಳು ಮಾಡಿದ್ದಾರೆ. ಅಷ್ಟೂ ಜಾಗದ ಪಹಣಿಗಳಲ್ಲಿ ‘ಸರ್ಕಾರಿ ಜಾಗ’, ‘ಪರಭಾರೆ ನಿಷೇಧ’ ಎಂದು ನಮೂದಿಸಲಾಗಿದೆ.

ತನಿಖಾ ತಂಡದ ವರದಿ ಆಧರಿಸಿ, ನಿಯಮ ಬಾಹಿರವಾಗಿ ಭೂಮಿ ಮಂಜೂರು ಮಾಡಿರುವ ಅಧಿಕಾರಿ ಮತ್ತು ನೌಕರರ ಪಟ್ಟಿ ಮಾಡಿದೆ. ಅನರ್ಹರ ಹೆಸರು, ದಾಖಲೆಗಳನ್ನು ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಿದವರಿಂದ ತಹಶೀಲ್ದಾರ್ ತನಕದ ಸಿಬ್ಬಂದಿ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ್ದ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ.

ಎಲ್ಲಾ 11 ಜನರಿಗೂ ನೋಟಿಸ್ ಜಾರಿ ಮಾಡಲಾಗಿದೆ. ನಿಯಮ ಏನು ಹೇಳುತ್ತದೆ, ಮಾಡಿರುವ ತಪ್ಪುಗಳೇನು, ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯ ಒಳಗೊಂಡ ದಾಖಲೆಗಳನ್ನೂ ನೀಡಲಾಗಿದೆ. 15 ದಿನಗಳಲ್ಲಿ ಲಿಖಿತವಾಗಿ ಉತ್ತರಿಸದಿದ್ದರೆ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ನೋಟಿಸ್ ನೀಡಲಾದ ಅಧಿಕಾರಿಗಳಲ್ಲಿ ಒಬ್ಬರು ತಹಶೀಲ್ದಾರ್ ಸೇರಿ ಮೂವರು ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಹಿಂದೆ ಮೂಡಿಗೆರೆಯಲ್ಲಿ ಶಿರಸ್ತೇದಾರ್ ಆಗಿದ್ದವರು ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರೇಡ್‌–2 ತಹಶೀಲ್ದಾರ್ ಆಗಿದ್ದಾರೆ. ಉಳಿದವರು ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

303 ಸಿಬ್ಬಂದಿ ಹೊಣೆ

ತನಿಖಾ ತಂಡ ನೀಡಿರುವ ವರದಿಯಲ್ಲಿ 104 ಗ್ರಾಮ ಆಡಳಿತಾಧಿಕಾರಿಗಳ ಹೆಸರುಗಳಿವೆ. ಅದರಲ್ಲೂ ಕಡೂರು ತಾಲ್ಲೂಕಿನಲ್ಲೇ 57 ಜನರ ಹೆಸರಿದೆ. ಇದಲ್ಲದೇ ಒಟ್ಟು 18 ಶಿರಸ್ತೇದಾರರು, 48 ಕಂದಾಯ ನಿರೀಕ್ಷರು, 36 ಕಚೇರಿ ಕಂದಾಯ ನಿರೀಕ್ಷಕರು, 35 ವಿಷಯ ನಿರ್ವಾಹಕರು (ಕೇಸ್ ವರ್ಕರ್), 26 ಭೂಮಿ ಆಪರೇಟರ್‌ಗಳು, 36 ಭೂಮಾಪಕರು ಕೂಡ ಹೊಣೆಗಾರರ ಪಟ್ಟಿಯಲ್ಲಿದ್ದಾರೆ. 

ಇಬ್ಬರು ಉಪವಿಭಾಗಾಧಿಕಾರಿಗಳು ಪ್ರತಿಯೊಂದು ಮಂಜೂರಾತಿ ಕಡತಗಳ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಗಿದಂತೆ ಹಂತ–ಹಂತವಾಗಿ ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧವಾಗುತ್ತಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಉನ್ನತ ತನಿಖೆ ಸಾಧ್ಯತೆ

ಸದ್ಯ ಮೂಡಿಗೆರೆ ತಾಲ್ಲೂಕಿನ ಸಿಬ್ಬಂದಿ ವಿರುದ್ಧ ದೋಷಾರೋಪ ಸಿದ್ಧವಾಗಿದ್ದು, ಕಡೂರು ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಕುರಿತು ಕಂದಾಯ ಇಲಾಖೆ ತನಿಖೆ ಪೂರ್ಣಗೊಳಿಸಿದೆ. 

ಅಧಿಕ ಪ್ರಮಾಣದಲ್ಲಿ ಅಕ್ರಮ ಭೂಮಂಜೂರಾತಿ ಆಗಿರುವುದರಿಂದ ಹೆಚ್ಚಿನ ತನಿಖೆಗೆ ಉನ್ನತ ಮಟ್ಟದ ತಂಡ ರಚಿಸುವ ಸಾಧ್ಯತೆಯೂ ಇವೆ ಎಂದು ಕಂದಾಯ ಇಲಾಖೆ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.