ADVERTISEMENT

ಕವಿಕಲ್ ಗಂಡಿ ಬಳಿ ಭೂಕುಸಿತ: ಬಸ್‌ ಬಾರದೇ ಮನೆಯಲ್ಲೆ ಕುಳಿತ ಮಕ್ಕಳು

ದುರಸ್ತಿಗೆ ಬೇಕು ಇನ್ನೂ ಹತ್ತು ದಿನ

ವಿಜಯಕುಮಾರ್ ಎಸ್.ಕೆ.
Published 4 ಆಗಸ್ಟ್ 2024, 6:28 IST
Last Updated 4 ಆಗಸ್ಟ್ 2024, 6:28 IST
ಕವಿಕಲ ಗಂಡಿ ಬಳಿ ಕುಸಿರುವ ರಸ್ತೆ
ಕವಿಕಲ ಗಂಡಿ ಬಳಿ ಕುಸಿರುವ ರಸ್ತೆ   

ಚಿಕ್ಕಮಗಳೂರು: ಅತ್ತಿಗುಂಡಿ, ಬಾಬಾ ಬುಡನ್‌ಗಿರಿಗೆ ಸಾಗುವ ಪ್ರಮುಖ ರಸ್ತೆ ಕವಿಕಲ್ ಗಂಡಿ ಬಳಿ ಕುಸಿದಿರುವುದರಿಂದ ಭಾರಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಕಳೆದ ಒಂದು ವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇಲ್ಲವಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲಾಗದೆ ಮನೆಯಲ್ಲೇ ಕೂರುವಂತಾಗಿದೆ.

ಅತ್ತಿಗುಂಡಿ, ಬಾಬಾ ಬುಡನ್‌ಗಿರಿ, ಮಹಲ್ ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ತೆರಳಲು ಒಂದೇ ಮಾರ್ಗ. ಈ ಮಾರ್ಗದಲ್ಲಿ ಕೊಂಚ ಭೂಕುಸಿತವಾದರೂ ಈ ಗ್ರಾಮಗಳಿಗೆ ಸಂಪರ್ಕವೇ ಬಂದ್ ಆಗಲಿದೆ.

ಕವಿಕಲ್‌ ಗಂಡಿಯಿಂದ ಸ್ವಲ್ಪ ಮುಂದೆ ಇಳಿಜಾರಿನಲ್ಲಿ ವಿದ್ಯುತ್ ಕಂಬ ಸಹಿತ ರಸ್ತೆಯ ಸ್ವಲ್ಪ ಭಾಗ ಕುಸಿದಿದ್ದು, ಗಿರಿ ಭಾಗದಲ್ಲಿ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ದುರಸ್ತಿ ಕಾರ್ಯವೂ ಕಷ್ಟವಾಗಿದೆ.

ADVERTISEMENT

ರಸ್ತೆ ಕುಸಿದು ಉಳಿದಿರುವ ಭಾಗದಲ್ಲಿ ಬೈಕ್, ಜೀಪ್‌, ಕಾರು ರೀತಿಯ ಸಣ್ಣ ವಾಹನಗಳ ಸಂಚಾರಕ್ಕಷ್ಟೇ ಸಾಧ್ಯವಿದೆ.  ಅಧಿಕ ಭಾರದ ವಾಹನಗಳು ಸಂಚರಿಸಿ ಕೊಂಚ ಮಣ್ಣು ಜರಿದರೂ ಇಡೀ ರಸ್ತೆಯೇ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಮಣ್ಣು ಇನ್ನಷ್ಟು ಜರಿಯದಂತೆ ಮರಳು ಚೀಲಗಳನ್ನು ತುಂಬಿ ಗಟ್ಟಿಗೊಳಿಸುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಮಾಡಿದ್ದಾರೆ. ಸಂಪೂರ್ಣ ದುರಸ್ತಿ ಕಾರ್ಯ ಪೂರ್ಣಕ್ಕೆ ಕನಿಷ್ಠ 10 ದಿನ ಬೇಕಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕವಿಕಲ್ ಗಂಡಿ ಬಳಿ ಕುಸಿದಿರುವ ಕಡೆ ದುರಸ್ತಿ ಕಾರ್ಯ ನಡೆಯುತ್ತಿದೆ. ಪೂರ್ಣಗೊಳ್ಳಲು ಇನ್ನೂ 10 ದಿನ ಕಾಲಾವಕಾಶ ಬೇಕಾಗಲಿದೆ.
ಗವಿರಂಗಪ್ಪ, ಪಿಡಬ್ಲ್ಯುಡಿ ಎಂಜಿನಿಯರ್

ಕೆಎಸ್‌ಆರ್‌ಟಿಸಿ ಬಸ್‌ ನಂಬಿಕೊಂಡಿದ್ದ ವಿದ್ಯಾರ್ಥಿಗಳು ಇನ್ನೂ ಹತ್ತು ದಿನ ಪರದಾಡಬೇಕಾಗಿದೆ. ಆ.15ರ ತನಕ ಗಿರಿಭಾಗಕ್ಕೆ ಪ್ರವಾಸಿಗರಿಗೆ ಅವಕಾಶ ಇಲ್ಲ. ಇದರಿಂದಾಗಿ ಸಣ್ಣ ವಾಹನಗಳ ಸಂಚಾರವೂ ವಿರಳವಾಗಿದೆ. ‍ಇಡೀ ಗಿರಿ ಪ್ರದೇಶ ಸ್ತಬ್ಧ ಆಗಿರುವುದಿಂದ ಬೇರೆ ವಾಹನಗಳ ಸಂಚಾರವೂ ಇಲ್ಲವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಗರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಸ್ವಂತ ವಾಹನ ಇದ್ದವರು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ. ನಾವು ಕೆಎಸ್‌ಆರ್‌ಟಿಸಿ ಬಸ್‌ ನಂಬಿದ್ದೆವು. ಕಾಲೇಜಿಗೆ ಹೋಗಬೇಕಾದ ಮಕ್ಕಳು ಮನೆಯಲ್ಲೇ ಕುಳಿತಿದ್ದಾರೆ’ ಎಂದು ಹೇಳುತ್ತಾರೆ.

ಇರುವುದೊಂದೇ ರಸ್ತೆ

ಅತ್ತಿಗುಂಡಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗ ಕಡೆಗೆ ಸಾಗಲು ಇರುವುದು ಒಂದೇ ರಸ್ತೆ. ಕೆಮ್ಮಣ್ಣುಗುಂಡಿ ಕಡೆಯಿಂದ ಇದ್ದ ಸಂಪರ್ಕ ರಸ್ತೆಯನ್ನು ಅರಣ್ಯ ಇಲಾಖೆ ಬಂದ್ ಮಾಡಿದೆ. ನೆತ್ತಿಚೌಕದಿಂದ ಕೆಮ್ಮಣ್ಣುಗುಂಡಿಗೆ ಕೇವಲ 14 ಕಿಲೋ ಮೀಟರ್ ದೂರವಿದೆ. ಸಂಚಾರ ಬಂದ್ ಮಾಡಿರುವುದರಿಂದ ರಸ್ತೆ ಈಗ ಸಂಪೂರ್ಣ ಹಾಳಾಗಿದೆ. ತಾತ್ಕಾಲಿಕವಾಗಿ ತೆರೆಯುವ ಸಂದರ್ಭ ಬಂದರೂ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ‘ಇರುವಷ್ಟು ರಸ್ತೆಯನ್ನೇ ದುರಸ್ತಿಗೊಳಿಸಿದರೆ ಎಲ್ಲರಿಗೂ ಅನುಕೂಲ ಆಗಲಿದೆ. ಒಂದೇ ರಸ್ತೆಯ ಮೇಲೆ ಅವಲಂಭಿತವಾದರೆ ಮುಂದಿನ ದಿನಗಳಲ್ಲಿ ಈ ಗ್ರಾಮಗಳು ಸಂಪರ್ಕ ಕಡಿದುಕೊಳ್ಳಲಿವೆ’ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.